ಎದೆಹಾಲು ಸಿಗದ ಮಕ್ಕಳಿಗಾಗಿ ‘ಅಮೃತಧಾರೆ’ – ರಾಜ್ಯದ 4 ಕಡೆ ಎದೆಹಾಲು ಸಂಗ್ರಹ ಕೇಂದ್ರ ತೆರೆಯಲು ಪ್ಲ್ಯಾನ್

ಎದೆಹಾಲು ಸಿಗದ ಮಕ್ಕಳಿಗಾಗಿ ‘ಅಮೃತಧಾರೆ’ – ರಾಜ್ಯದ 4 ಕಡೆ ಎದೆಹಾಲು ಸಂಗ್ರಹ ಕೇಂದ್ರ ತೆರೆಯಲು ಪ್ಲ್ಯಾನ್

ಮಕ್ಕಳಿಗೆ ತಾಯಿಯ ಎದೆಹಾಲು ಅಮೃತಕ್ಕಿಂತ ಹೆಚ್ಚು. ತಾಯಿಗೂ ಅಷ್ಟೇ ಮಗುವಿಗೆ ಹಾಲುಣಿಸುವ ಸಮಯ ಹೆಚ್ಚು ವಿಶೇಷವಾಗಿರುವಂತಹದ್ದು. ಶಿಶುಗಳಿಂದ ಹಿಡಿದು ಎರಡ್ಮೂರು ವರ್ಷದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸ್ತನ್ಯಪಾನಕ್ಕೆ ಸಾಕಷ್ಟು ಒತ್ತು ನೀಡಲಾಗುತ್ತದೆ. ಎದೆ ಹಾಲು ಮಗುವಿಗೆ ಸಿಗುವ ಅತೀ ಶ್ರೇಷ್ಠ ನೈಸರ್ಗಿವಾದ ಪೌಷ್ಠಿಕ ಆಹಾರ ಎನ್ನುವ ಮಾತಲ್ಲಿ ಕಿಂಚಿತ್ತೂ ಸಂದೇಹವೇ ಇಲ್ಲ. ತಾಯಿ ಎದೆಹಾಲು ಮಕ್ಕಳಿಗೆ ಹಲವಾರು ರೀತಿಯ ಪೋಷಕಾಂಶ ನೀಡುತ್ತದೆ. ಆದರೆ ಕೆಲ ಮಕ್ಕಳು ಹಲವು ಕಾರಣಗಳಿಂದ ಎದೆಹಾಲಿನಿಂದ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಅಂತಹ ಮಕ್ಕಳಿಗೆ ಅನುಕೂಲ ಆಗಲಿ ಎಂದು ರಾಜ್ಯ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ : ಜೂನ್ 27ರಿಂದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ – ಫಲಾನುಭವಿಗಳ ಆಯ್ಕೆ ಬಗ್ಗೆ ಮಹತ್ವದ ಮಾಹಿತಿ

ಎದೆ ಹಾಲು ಇಲ್ಲದೆ ಅದೆಷ್ಟೋ ಮಕ್ಕಳ ಬೆಳವಣಿಗೆ ಮೇಲೆ ಅಪಾರ ಪರಿಣಾಮ ಬೀರುತ್ತಿದೆ. ಶೇಕಡಾ 68 ರಷ್ಟು ಶಿಶುಗಳು ತಾಯಿಯಿಂದ ಹಲವು ಕಾರಣಗಳಿಗಾಗಿ ದೂರವಾಗಿ ಎದೆಹಾಲಿನ (Breast Milk) ಕೊರತೆಯಿಂದ ಬಳಲುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಎರಡು ತಿಂಗಳಿನಲ್ಲಿ ಮೈಸೂರು, ಬೆಳಗಾವಿ, ಕಲಬುರಗಿ ಹಾಗೂ ಬೆಂಗಳೂರು ಈ ನಾಲ್ಕು ಕೇಂದ್ರಗಳಲ್ಲಿ ಎದೆಹಾಲು ಸಂಗ್ರಹದ ‘ಅಮೃತಧಾರೆ’ ಹ್ಯೂಮನ್‌ ಮಿಲ್ಕ್‌ ಬ್ಯಾಂಕ್‌ (Human Milk Bank) ತೆರೆಯಲು ಆರೋಗ್ಯ ಇಲಾಖೆ ಎಲ್ಲ ತಯಾರಿಗಳನ್ನು ನಡೆಸುತ್ತಿದೆ.

ಎದೆ ಹಾಲು ಉತ್ಪಾದಿಸದ, ಅಕಾಲಿಕವಾಗಿ ಹಾಗೂ ತೂಕವಿಲ್ಲದ ಮಕ್ಕಳು ಸಾಮಾನ್ಯವಾಗಿ ತಾಯಿಯ ಎದೆ ಹಾಲಿನ ಕೊರತೆ ಎದುರಿಸುತ್ತಾರೆ. ಇಂತಹ ಶಿಶುಗಳಿಗೆ ಎದೆಹಾಲು ನೀಡುವ ವ್ಯವಸ್ಥೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ 150 ಮಿ.ಲೀ. ಹಾಲಿಗೆ 3 ಸಾವಿರದಿಂದ 4 ಸಾವಿರ ದವರೆಗೂ ಚಾರ್ಜ್‌ ಮಾಡಲಾಗುತ್ತೆ. ಈ ನಿಟ್ಟಿನಲ್ಲಿ ಮಗುವಿನ ಆರೋಗ್ಯ ದೃಷ್ಟಿಯಿಂದ ಎದೆಹಾಲು ಹೇಗಾದರೂ ನೀಡಬೇಕೆನ್ನುವ ನಿಟ್ಟಿನಲ್ಲಿ ‘ಅಮೃತಧಾರೆ’ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸ್ವತಃ ತಾಯಿಯಿಂದ ಮಗುವಿಗೆ ಅಥವಾ ದಾನಿಗಳಿಂದ ಇತರೆ ತಾಯಿಯ ಮಗುವಿಗೆ ನೀಡಲು ಹಾಲು ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿತವಾದ ಹಾಲನ್ನು 6 ತಿಂಗಳ ಕಾಲ ಪಾಶ್ಚರೀಕರಿಸಿ 18 ಡಿಗ್ರಿ ಸೆಲ್ಸಿಯಸ್‌ ನಲ್ಲಿ ಸ್ಟೋರೇಜ್‌ ಮಾಡಲಾಗುತ್ತದೆ.

ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎದೆಹಾಲು ಹೊಂದಿರುವ ಆರೋಗ್ಯವಂತ ತಾಯಂದಿರು ಯಾರು ಬೇಕಿದ್ದರೂ ದಾನ ಮಾಡಬಹುದಾಗಿದೆ. ಆದರೆ ದಾನ ನೀಡುವ ತಾಯಂದಿರು ಕಡ್ಡಾಯವಾಗಿ ಹೆಚ್‌ಐವಿ, ಹೆಪಟೈಟಿಸ್‌ ಬಿ&ಸಿ ಮತ್ತು ವಿಡಿಆರ್‌ಎಲ್‌ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಈ ಎಲ್ಲ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದ ತಾಯಂದಿರು ಎದೆ ಹಾಲನ್ನು ದಾನ ನೀಡಬಹುದಾಗಿದೆ. ದಾನಿಗಳಿಂದ ಸಂಗ್ರಹಿಸಿದ ಹಾಲನ್ನು ಮೊದಲು ಸ್ಕ್ರೀನಿಂಗ್‌ ಗೆ ಒಳಪಡಿಸಲಾಗುತ್ತದೆ. ನಂತರ ಪಾಶ್ಚರೀಕರಿಸಿ ರೋಗಾಣು ನಾಶ ಮಾಡಲಾಗುತ್ತದೆ. ಬಳಿಕ ಅದನ್ನು ಬಾಟಲಿಯಲ್ಲಿ ಸಂಗ್ರಹಿಸಿ 18 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಸಂಗ್ರಹಿಸಡಲಾಗುತ್ತದೆ.

suddiyaana