15 ಲಕ್ಷ ಶಾಲಾ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಗೆ ಹೊಂದಾಣಿಕೆಯಾಗದ ಆಧಾರ್ ಕಾರ್ಡ್
ಆಧಾರ್ ಕಾರ್ಡ್. ಈಗ ಎಲ್ಲಾ ಕ್ಷೇತ್ರಗಳಲ್ಲೂ ಕಡ್ಡಾಯವಾಗಿ ಬೇಕಾಗಿರುವ ದಾಖಲೆ ಪತ್ರ. ಶಾಲಾ ಮಕ್ಕಳು ತಮ್ಮ ಆಧಾರ್ ಕಾರ್ಡ್ ಅನ್ನು ವ್ಯಾಸಾಂಗ ಮಾಡುತ್ತಿರುವ ಶಾಲೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಆದರೆ ಹೀಗೆ ಸಲ್ಲಿಸಿದ ಆಧಾರ್ ಕಾರ್ಡ್ ಗಳ ಪರಿಶೀಲನೆ ವೇಳೆ ಬರೋಬ್ಬರಿ 15 ಲಕ್ಷ ವಿದ್ಯಾರ್ಥಿಗಳ ಶಾಲಾ ದಾಖಲಾತಿ ವಿವರಗಳು ಆಧಾರ್ ಕಾರ್ಡ್‌ನಲ್ಲಿರುವ ವಿವರಗಳಿಗೆ ಹೊಂದಿಕೆಯಾಗದಿರುವುದು ತಿಳಿದುಬಂದಿದೆ.
ಇದನ್ನೂ ಓದಿ : ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ KSRTC ಬಸ್ ನಿಲ್ದಾಣ! – ಉಚಿತ ಓಡಾಟ ಉತ್ಸಾಹ ಕಳೆದುಕೊಂಡ್ರಾ ಮಹಿಳೆಯರು?
ಶಿಕ್ಷಣ ಇಲಾಖೆಯ ಸೂಚನೆ ಮೇರೆಗೆ ಮಕ್ಕಳು ಶಾಲೆಗಳಿಗೆ ಸಲ್ಲಿಸಿರುವ ಆಧಾರ್ ಕಾರ್ಡ್ (Aadhaar Card) ಪರಿಶೀಲನೆ ವೇಳೆ ಸುಮಾರು 15 ಲಕ್ಷ ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ನಲ್ಲಿರುವ ಹೆಸರುಗಳು ಶಾಲಾ ದಾಖಲಾತಿ ವೇಳೆ ನಮೂದಿಸಿರುವ ಹೆಸರುಗಳಿಗೆ ಹೊಂದಿಕೆಯಾಗದಿರುವುದು ತಿಳಿದುಬಂದಿದೆ. ಹೀಗಾಗಿ ಪೋಷಕರು ಆಧಾರ್ ಕಾರ್ಡ್‌ಗಳಲ್ಲಿ ಹೆಸರುಗಳನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಕೇಂದ್ರ ಸರ್ಕಾರವು ಫೆಬ್ರವರಿ 17 ರಂದು ಹೊರಡಿಸಿದ ಸುತ್ತೋಲೆಯಲ್ಲಿ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ವಿವಿಧ ವಿದ್ಯಾರ್ಥಿವೇತನಗಳಿಗೆ ಮತ್ತು ವಿವಿಧ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳ ದಾಖಲಾತಿಗೆ ಆಧಾರ್ ಸಂಖ್ಯೆಯನ್ನು ನವೀಕರಿಸುವಂತೆ ಸೂಚಿಸಿದೆ. ಅದರಂತೆ ಮಕ್ಕಳು ಶಾಲೆಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಸಲ್ಲಿಸಬೇಕು. ಅದರಂತೆ ವಿದ್ಯಾರ್ಥಿಗಳು ಶಾಲೆಗಳಿಗೆ ಆಧಾರ್ ಕಾರ್ಡ್ ಸಲ್ಲಿಕೆ ಮಾಡಿದ್ದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 1 ಕೋಟಿಗೂ ಅಧಿಕ ವಿದ್ಯಾರ್ಥಿಗಳ ಪೈಕಿ 78 ಲಕ್ಷ ಮಂದಿಯ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಲಾಗಿದೆ. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಂಡಿದೆ. ಹೆಚ್ಚಿನ ಮಕ್ಕಳು ಮೂರು ಪದಗಳನ್ನು ಒಳಗೊಂಡಿರುವ ಹೆಸರನ್ನು ಹೊಂದಿದ್ದಾರೆ. ಶಾಲಾ ದಾಖಲಾತಿಯಲ್ಲಿರುವ ಹೆಸರುಗಳನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಪೋಷಕರು ಆಧಾರ್ ಕಾರ್ಡ್‌ಗಳಲ್ಲಿ ಬದಲಾಯಿಸಿ ಅವುಗಳನ್ನು ನಮಗೆ ಮತ್ತೆ ಸಲ್ಲಿಸಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿವಿಧ ಶಾಲೆಗಳಲ್ಲಿ ಸುಮಾರು 30,000 ಹೆಸರುಗಳನ್ನು ನಕಲು ಮಾಡಲಾಗಿರುವುದು ದಾಖಲಾಗಿದೆ. ಫೆಬ್ರವರಿಯಿಂದ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು 14 ಲಕ್ಷ ಮಕ್ಕಳು ಶಾಲೆಗಳಿಗೆ ಆಧಾರ್ ಕಾರ್ಡ್ ಸಲ್ಲಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಹೆಚ್ಚಿನ ಪೋಷಕರು ತಮ್ಮ ಮಕ್ಕಳ ಜನ್ಮ ಪ್ರಮಾಣಪತ್ರಗಳನ್ನು ಸಲ್ಲಿಸುತ್ತಾರೆ ಎಂದು ಶಾಲೆಗಳು ಹೇಳುತ್ತವೆ.