ಮೆಟ್ರೋದೊಳಗೆ ಜೋರಾಗಿ ಸಂಗೀತ ಕೇಳಿದ್ರೆ ಹುಷಾರ್! – ರೂಲ್ಸ್ ಬ್ರೇಕ್ ಮಾಡಿದ್ರೆ ಕಠಿಣ ಕ್ರಮ?
ಬೆಂಗಳೂರು: ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವಾಗ ಜೋರಾಗಿ ಮ್ಯೂಸಿಕ್ ಹಾಕುವುದನ್ನು ನಿಷೇಧಿಸಲಾಗಿದೆ. ಇನ್ನು ಮುಂದೆ ಜೋರಾಗಿ ಮ್ಯೂಸಿಕ್ ಹಾಕಿದ್ರೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಆದೇಶ ಹೊರಡಿಸಿದ್ದು, ಪ್ರಯಾಣಿಕರು ಇತರರಿಗೆ ತೊಂದರೆ ಆಗುವಂತೆ ಧ್ವನಿವರ್ಧಕಗಳನ್ನು ಹಾಕಬಾರದು ಎಂದು ತಿಳಿಸಿದೆ.
ಇದನ್ನೂ ಓದಿ: ಸಾವಿನ ಎಕ್ಸ್‌ಪ್ರೆಸ್ ವೇ ಆಯ್ತಾ ಮೈಸೂರು – ಬೆಂಗಳೂರು ದಶಪಥ ಹೆದ್ದಾರಿ? – ದುರಂತಗಳ ಹಿಂದಿದೆ ಸಾಲು ಸಾಲು ಕಾರಣ
ಮೆಟ್ರೋ ರೈಲುಗಳಲ್ಲಿ ದೊಡ್ಡದಾಗಿ ಸಂಗೀತ ಹಾಕುವುದು ಸರಿಯಲ್ಲ. ಇತರೆ ಪ್ರಯಾಣಿಕರಿಗೆ ಇದು ಕಿರಿಕಿರಿ ಉಂಟುಮಾಡುತ್ತದೆ. ಸಾರ್ವಜನಿಕರಿಗೆ ತೊಂದರೆ ತಪ್ಪಿಸುವ ಸಲುವಾಗಿ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ಲೌಡ್ ಸ್ಪೀಕರ್ ಮೂಲಕ ಸಂಗೀತ ಪ್ರಸಾರ ಮಾಡಬಾರದು. ಆದರೆ ಇಯರ್ ಫೋನ್ ಬಳಸಿ ಸಂಗೀತ ಆಲಿಸಲು ಅವಕಾಶ ನೀಡಲಾಗಿದೆ ಎಂದು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣಿಸುವಾಗ ವಿದ್ಯಾರ್ಥಿಗಳು, ಉದ್ಯೋಗಿಗಳು ಓದುವುದು, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದನ್ನು ಕಾಣುತ್ತೇವೆ. ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ದೂರವಾಣಿಯಲ್ಲಿ ಮಾತನಾಡುತ್ತಾರೆ. ದೊಡ್ಡದಾಗಿ ಮ್ಯೂಸಿಕ್ ಹಾಕಿದರೆ ಸಹಜವಾಗಿ ತೊಂದರೆ ಆಗುತ್ತದೆ. ಹೀಗಾಗಿ ಈ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಆದರೆ, ರೈಲಿನಲ್ಲಿ ಧ್ವನಿವರ್ಧಕಗಳಲ್ಲಿ ಇಲ್ಲವೇ ಜೋರಾಗಿ ಸಂಗೀತ ಪ್ರಸಾರ ಮಾಡುವವರಿಗೆ ಏನು ಶಿಕ್ಷೆ, ಎಷ್ಟು ದಂಡ ಎಂಬುದನ್ನು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿಲ್ಲ. ಬಿಎಂಆರ್‌ಸಿಎಲ್ ಮೆಟ್ರೋ ರೈಲುಗಳಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ವಿಷಯಗಳ ಬಗ್ಗೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಚಿತ್ರಗಳು, ವಿಡಿಯೋ ಡಿಸ್ಲೈ ಆಧರಿಸಿ ಜನರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ.
ಮೆಟ್ರೋ ನಿಲ್ದಾಣ ವ್ಯಾಪ್ತಿಯಲ್ಲಿ ಧೂಮಪಾನ, ಮೆಟ್ರೋ ಒಳಗೆ ಆಹಾರ ಸೇವನೆಗೆ ನಿರ್ಬಂಧ ಹೇರಲಾಗಿದೆ. ರೈಲು ಹತ್ತುವಾಗ ಲೈನ್ ವ್ಯವಸ್ಥೆಯನ್ನು ಪಾಲಿಸಬೇಕು. ರೈಲಿಗೆ ಕಾಯುತ್ತ ನಿಂತಾಗಲೂ ಅಗತ್ಯ ಮುನ್ಸೂಚನೆಗಳನ್ನು ಅನುಸರಿಸುವುದು, ಬೋಗಿಗಳಲ್ಲಿ ನಿಂತಾಗ ಬಾಗಿಲು ತೆರೆಯುವುದು, ಬಾಗಿಲ ಸಂಧಿಯಲ್ಲಿ ಕೈ ಇಡುವುದು ಸೇರಿ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.