ನಮ್ಮ ಮೆಟ್ರೋ ನೇರಳೆ ಮಾರ್ಗ ಆಗಸ್ಟ್ ತಿಂಗಳಲ್ಲಿ ಪೂರ್ಣ – ಚಲ್ಲಘಟ್ಟ – ವೈಟ್‌ಫೀಲ್ಡ್ ಸಂಚಾರ ಇನ್ನು ಮುಂದೆ ಸುಲಭ!
ಬೆಂಗಳೂರು: ಹಳೇ ಮದ್ರಾಸ್ ರೋಡ್ ಬಳಿಯ ಬೆನ್ನಿಗನಹಳ್ಳಿ ಹಾಗೂ ಮೈಸೂರು ರಸ್ತೆಯ ಚಲ್ಲಘಟ್ಟ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ವೇಗ ಸಿಕ್ಕಿದೆ. ನೇರಳೆ ಬಣ್ಣದ ಈ ಮೆಟ್ರೋ ಮಾರ್ಗ ಆಗಸ್ಟ್ ವೇಳೆಗೆ ಸಿದ್ದವಾಗುವ ಸಾಧ್ಯತೆ ಇದೆ.
ಹಳೇ ಮದ್ರಾಸ್ ರೋಡ್ ಬಳಿಯ ಬೆನ್ನಿಗನಹಳ್ಳಿ ಹಾಗೂ ಮೈಸೂರು ರಸ್ತೆಯ ಚಲ್ಲಘಟ್ಟ ಬಳಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ಜುಲೈನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕೆಲಸಗಳನ್ನು ಮುಂದೂಡಲಾಗಿದೆ. ಆಗಸ್ಟ್‌ನೊಳಗೆ ನೇರಳೆ ಮಾರ್ಗವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವ ಭರವಸೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನೀಡಿದೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಖುಷಿ ಸುದ್ದಿ! – ಸಿಲಿಕಾನ್ ಸಿಟಿಯಲ್ಲಿ ಮತ್ತೆ 3 ಕಡೆಗಳಲ್ಲಿ ‘ನಮ್ಮ ಮೆಟ್ರೋ’ ಮಾರ್ಗ?
ನೇರಳೆ ಮಾರ್ಗದಲ್ಲಿ 2 ಬಾಕಿ ಕಾಮಗಾರಿಗಳಿದ್ದು, 4 ಕಿ.ಮೀ ಅಂತರವನ್ನು ಹೊಂದಿದೆ. ಈ ಎರಡು ಕಡೆ ಮೆಟ್ರೋ ಕಾಮಗಾರಿ ಮುಗೊದರೆ ನೇರಳೆ ಮಾರ್ಗ 43.5 ಕಿಮೀ ಅಂತರದ ಮೆಟ್ರೋ ಮಾರ್ಗ ಹೊಂದಿದಂತಾಗಲಿದೆ. ಈ ಮೂಲಕ ಮೈಸೂರು ರಸ್ತೆಯ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೂ ನೇರಳೆ ಮಾರ್ಗದ ಮೂಲಕ ಸಂಚರಿಸಬಹುದಾಗಿದ್ದು, ಬೆಂಗಳೂರು ನಗರದ ಪೂರ್ವ ಭಾಗದಿಂದ ಪಶ್ಚಿಮ ಭಾಗಕ್ಕೆ ವೇಗ ಹಾಗೂ ಸುಲಭವಾಗಿ ಸಂಚರಿಸುವ ಆಯ್ಕೆ ಸಿಗಲಿದೆ.
ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಬಸ್ ಅಥವಾ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸಲು ಎರಡರಿಂದ ಮೂರು ತಾಸು ಬೇಕಾಗುತ್ತದೆ. ಈ ಮೆಟ್ರೋ ಕಾಮಗಾರಿ ಆಗಸ್ಟ್ ವೇಳೆಗೆ ಮುಕ್ತಾಯಗೊಂಡರೆ, ಬೆಂಗಳೂರಿಗರು ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೂ ಕೇವಲ 1.40 ನಿಮಿಷದಲ್ಲಿ ಸಂಚರಿಸಬಹುದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್, ಕೆಂಗೇರಿ ಮತ್ತು ಚಲ್ಲಘಟ್ಟದ ನಡುವಿನ ಮೆಟ್ರೋ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಶೀಘ್ರದಲ್ಲಿಯೇ ಪರೀಕ್ಷಾರ್ಥ ಸಂಚಾರವನ್ನು ನಡೆಸುತ್ತೇವೆ. ಆದರೆ, ಬೆನ್ನಿಗನಹಳ್ಳಿ ಮೆಟ್ರೋ ನಿಲ್ದಾಣದ ಕಾಮಗಾರಿ ಮುಗಿಯಲು ಸ್ವಲ್ಪ ಸಮಯ ಬೇಕಾಗುತ್ತದೆ. ಹಳೇ ಮದ್ರಾಸ್ ರಸ್ತೆಯಲ್ಲಿ ಕಾಮಗಾರಿ ನಡೆಯಬೇಕಿರುವುದರಿಂದ ವಾಹನ ಸಂಚಾರದ ಮಾರ್ಗ ಬದಲಿಸಬೇಕಿದೆ. ಇದಕ್ಕೆ ನಾವು ಈಗಾಗಲೇ ಅನುಮತಿಯನ್ನು ಪಡೆದಿದ್ದೇವೆ. ಜುಲೈ ಮಧ್ಯದ ವೇಳೆಗೆ ಬೈಯಪ್ಪನಹಳ್ಳಿ ಹಾಗೂ ಕೆಆರ್ ಪುರಂ ನಡುವೆ ಮೆಟ್ರೋ ಪರೀಕ್ಷಾರ್ಥ ಸಂಚಾರ ನಡೆಸಲಿದೆ ಎಂದಿದ್ದಾರೆ.
ನೂರು ನಿಮಿಷದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಪ್ರಯಾಣ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸುವ ಸಂಪೂರ್ಣ ನೇರಳೆ ಮಾರ್ಗದ ಕಾರ್ಯಾರಂಭ ಬೆಂಗಳೂರು ನಗರದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ. ಪ್ರಯಾಣಿಕರ ಪ್ರಯಾಣದ ಅವಧಿಯನ್ನು ಭಾರೀ ಪ್ರಮಾಣದಲ್ಲಿ ನಮ್ಮ ಮೆಟ್ರೋ ಕಡಿಮೆ ಮಾಡುವುದರಿಂದ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಅಂಜುಂ ಪರ್ವೇಜ್ ಅವರ ಪ್ರಕಾರ ಮೆಟ್ರೋದಲ್ಲಿ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ತಲುಪಲು ಅಂದಾಜು ಒಂದು ಗಂಟೆ 40 ನಿಮಿಷ ಸಮಯ ಹಿಡಿಯಬಹುದು ಎಂದು ಹೇಳಿದ್ದಾರೆ.
ನೇರಳೆ ಮಾರ್ಗ ಪೂರ್ತಿಯಾಗಿ ಕಾರ್ಯಾರಂಭಿಸಿದ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಕನಿಷ್ಠ 70 ಸಾವಿರ ಪ್ರಯಾಣಿಕರ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದೇವೆ. ಉತ್ತಮ ಪ್ರಯಾಣದ ಅನುಭವ ನೀಡುತ್ತಿರುವುದರಿಂದ ಬಹಳಷ್ಟು ಜನ ನಮ್ಮ ಮೆಟ್ರೋಗೆ ಶಿಫ್ಟ್ ಆಗುತ್ತಿದ್ದಾರೆ ಎಂದು ಅಂಜುಂ ಪರ್ವೇಜ್ ಹೇಳಿದ್ದಾರೆ. ಅದಲ್ಲದೇ ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋ ಬಿಬಿಎಂಪಿಯ ಮಿತಿ ದಾಟಿ ಹೊರಹೋಗುತ್ತಿದೆ. ಚಲ್ಲಘಟ್ಟ ನಿಲ್ದಾಣ ಹೊಸದಾಗಿ ಪ್ರಾರಂಭವಾಗಿರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಗೆ ಹತ್ತಿರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.