ʼನಟ ಶಾರುಖ್ ರೀಲ್ ದೇವದಾಸ್, ರಾಹುಲ್ ಗಾಂಧಿ ನಿಜ ಜೀವನದಲ್ಲಿ ದೇವದಾಸ್ʼ! – ಬಿಜೆಪಿ ಲೇವಡಿ

ಪಾಟ್ನಾ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳು ಒಗ್ಗಟ್ಟಿನ ರಣಕಹಳೆ ಮೊಳಗಿಸಿವೆ. ಬಿಜೆಪಿಯನ್ನು ಎದುರಿಸುವ ಉದ್ದೇಶದಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯೋಜಿಸಿರುವ ಪ್ರತಿಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪಾಟ್ನಾಕ್ಕೆ ಆಗಮಿಸಿದ್ದಾರೆ. ಈ ವೇಳೆ ಪಾಟ್ನಾದಲ್ಲಿ ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡುವ ಪೋಸ್ಟರ್ ಗಳನ್ನು ಹಾಕಿದ್ದಾರೆ.
ಪ್ರತಿಪಕ್ಷಗಳ ಸಭೆಗೂ ಮುನ್ನ ಪಾಟ್ನಾದ ಬಿಜೆಪಿ ಕಚೇರಿಯ ಹೊರಗೆ ರಾಹುಲ್ ಗಾಂಧಿ ವಿರುದ್ಧ ಈ ಪೊಸ್ಟರ್ ಗಳನ್ನು ಹಾಕಲಾಗಿದೆ. ಈ ಪೋಸ್ಟರ್ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ರೀಲ್ ದೇವದಾಸ್ರಾದರೆ, ರಾಹುಲ್ ಗಾಂಧಿ ನಿಜ ಜೀವನದಲ್ಲಿ ದೇವದಾಸ್ ಆಗಿದ್ದಾರೆ ಎಂದು ಬರೆಯಲಾಗಿದೆ. ಅಲ್ಲದೇ, ಮಮತಾ ದೀದಿ ಬಂಗಾಳ ತೊರೆಯುವಂತೆ, ಕೇಜ್ರಿವಾಲ್ ದೆಹಲಿ ಮತ್ತು ಪಂಜಾಬ್ ತೊರೆಯುವಂತೆ, ಲಾಲು ಮತ್ತು ನಿತೀಶ್ ಕುಮಾರ್ ಬಿಹಾರ ತೊರೆಯುವಂತೆ, ಅಖಿಲೇಶ್ ಯಾದವ್ ಉತ್ತರ ಪ್ರದೇಶವನ್ನು ತೊರೆಯುವಂತೆ ಮತ್ತು ಸ್ಟಾಲಿನ್ ತಮಿಳುನಾಡನ್ನು ತೊರೆಯುವಂತೆ ರಾಹುಲ್ ಗಾಂಧಿಗೆ ಹೇಳಿದ್ದಾರೆ. ರಾಹುಲ್ರಾಜಕೀಯವನ್ನು ತೊರೆಯಲಿ ಎಂದು ಹೇಳುವ ದಿನಗಳು ದೂರವಿಲ್ಲ ಎಂದು ಪೋಸ್ಟರ್ನಲ್ಲಿ ಉಲ್ಲೇಖಿಸಲಾಗಿದೆ.