ಡೇ ಕೇರ್ನಲ್ಲಿ ಮಕ್ಕಳು ಎಷ್ಟು ಸೇಫ್? – ಪೋಷಕರನ್ನು ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯ..!
ಬೆಂಗಳೂರಲ್ಲಿ ಜೀವನ ನಡೆಸಲು ಗಂಡ ಹೆಂಡತಿ ಇಬ್ಬರೂ ದುಡಿಯಲೇಬೇಕಾದ ಅನಿವಾರ್ಯತೆ ಅನೇಕರಿಗೆ ಇರುತ್ತದೆ. ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿರುವ ಕೆಲ ಪೋಷಕರಿಗೆ ಮಕ್ಕಳಾದ ಮೇಲೆ ಕೆಲಸಕ್ಕೆ ಹೋಗಲೇಬೇಕು. ಆದರೆ, ಮಕ್ಕಳನ್ನು ಬಿಡುವುದು ಎಲ್ಲಿ ಅನ್ನೋ ಚಿಂತೆ. ಇಂಥವರಿಗಾಗಿಯೇ ಬೆಂಗಳೂರಿನಲ್ಲಿ ಡೇ ಕೇರ್ ಸೆಂಟರ್ಗಳು ಹುಟ್ಟಿಕೊಂಡಿರುವುದು. ಆದರೆ, ಪುಟಾಣಿ ಮಕ್ಕಳ ಭವಿಷ್ಯಕ್ಕಾಗಿ ದುಡಿಯುವ ಪೋಷಕರು, ಆ ಕಂದಮ್ಮಗಳನ್ನು ಬಿಟ್ಟುಹೋಗುವ ಡೇ ಕೇರ್ ಸೆಂಟರ್ಗಳು ಎಷ್ಟು ಸೇಫ್ ಅನ್ನೋ ಪ್ರಶ್ನೆಯೊಂದು ಈಗ ಎದುರಾಗಿದೆ. ಯಾಕೆಂದರೆ, ಇಲ್ಲೊಂದು ಡೇ ಕೇರ್ ಸೆಂಟರ್ನಲ್ಲಿ ಮಕ್ಕಳೇ ಹೊಡೆದಾಡಿಕೊಂಡಿದ್ದಾರೆ. ಆದರೆ, ಒಂದು ಮಗು ಅದೆಷ್ಟು ಏಟು ತಿಂದು ಚೀರಾಡುತ್ತಿದೆ ಎಂದರೆ ಆ ವಿಡೀಯೋ ಕಂಡರೆ ಎಲ್ಲಾ ತಾಯಂದಿರಿಗೂ ಸಂಕಟವಾಗದೇ ಇರಲು ಸಾಧ್ಯವೇ ಇಲ್ಲ. ಆದರೆ, ಆ ಮಗು ಅಷ್ಟೊಂದು ಏಟು ತಿಂದು ಚೀರಾಡುತ್ತಿದ್ದರೂ ಒಬ್ಬರೇ ಒಬ್ಬ ಡೇ ಕೇರ್ ಸಿಬ್ಬಂದಿ ಅಲ್ಲಿರುವುದೇ ಇಲ್ಲ.
ಇದನ್ನೂ ಓದಿ: ಶಾಲಾ ಮಕ್ಕಳಿಗೆಗುಡ್ ನ್ಯೂಸ್ – ಬ್ಯಾಗ್ ಹೊರೆ ಇಳಿಸಿದ ಶಿಕ್ಷಣ ಇಲಾಖೆ
ಚಿಕ್ಕಲಸಂದ್ರದಲ್ಲಿ ಇರೋ ಟೆಂಡರ್ ಫೂಟ್ ಡೇ ಕೇರ್ ಸೆಂಟರ್ ನಲ್ಲಿ ನಡೆದಿರುವ ಘಟನೆ ಇದಾಗಿದೆ. ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ತಾ ಇದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗ್ತಾರೆ. ಆ ಸಮಯದಲ್ಲಿ ಬಾಗಿಲನ್ನು ಹಾಕಿಯೇ ಆಯಾ ಹೊರಗೆ ಹೋಗಿರುತ್ತಾರೆ. ಪಾಪ.. ಅವರಿಗೂ ಗೊತ್ತಿರಲು ಸಾಧ್ಯವಿಲ್ಲ ಇಲ್ಲೊಂದು ಮಗು ಹೀಗೆಲ್ಲಾ ಅವಾಂತರ ಮಾಡುತ್ತದೆ ಅನ್ನೋದು. ಆಯಾ ಇಲ್ಲದಿರುವ ಟೈಮ್ ನೋಡಿಕೊಂಡು ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆಯುತ್ತದೆ. ವಿಪರ್ಯಾಸವೆಂದರೆ ಅಲ್ಲಿ ಆಯಾ ಇಲ್ಲದಿರುವುದು ಕೇವಲ ಮೂರು ನಾಲ್ಕು ನಿಮಿಷ ಅಷ್ಟೇ. ಅದೇ ಸಮಯದಲ್ಲಿ ಆ ಮಗು ಇನ್ನೊಂದು ಮಗುವಿಗೆ ಸರಿಯಾಗಿಯೇ ಏಟು ಕೊಡುತ್ತದೆ. ಮಕ್ಕಳು ಹೊಡೆದಾಡಿಕೊಳ್ಳುವ ಬಗ್ಗೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಉಳಿದ ಮಕ್ಕಳು ಹೇಳುತ್ತಾರೆ. ಆದರೆ, ಅವರು ಮಕ್ಕಳು ಹೇಳಿದ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ಗಾಯಗೊಂಡು ಮನೆಗೆ ಹೋದ ಮಗುವಿನ ಪೋಷಕರು ಬಂದು ಡೇ ಕೇರ್ ಸೆಂಟರ್ನ ಸಿಸಿಟಿವಿ ಫೂಟೇಜ್ ನೋಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ವಿಡಿಯೋ ನೋಡಿ ಗಾಬರಿಗೊಂಡ ಪೋಷಕರು ಡೇ ಕೇರ್ ಸೆಂಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನಂತರ, ಡೇ ಕೇರ್ ಸೆಂಟರ್ ಮಾಲೀಕರು ಮತ್ತು ಸಿಬ್ಬಂದಿ ಕೇವಲ ಹಣವನ್ನು ಪಡೆದು ವಂಚನೆ ಮಾಡುತ್ತಿದ್ದು, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಟ್ವಿಟರ್ ಮೂಲಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ನಗರ ಪೊಲೀಸರಿಂದ ಸೂಚನೆ ನೀಡಲಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.