ಉರಿಯುವುದು ಎರಡೇ ಬಲ್ಬ್‌.. ಕರೆಂಟ್‌ ಬಿಲ್‌ ಬಂದಿದ್ದು ಲಕ್ಷ! – ಮೀಟರ್‌ ಸಮಸ್ಯೆಯಿಂದ ಆಯ್ತು ಎಡವಟ್ಟು

ಉರಿಯುವುದು ಎರಡೇ ಬಲ್ಬ್‌.. ಕರೆಂಟ್‌ ಬಿಲ್‌ ಬಂದಿದ್ದು ಲಕ್ಷ! – ಮೀಟರ್‌ ಸಮಸ್ಯೆಯಿಂದ ಆಯ್ತು ಎಡವಟ್ಟು

ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿದ ಬೆನ್ನಲ್ಲೇ  ರಾಜ್ಯದ ಹಲವೆಡೆ ಲಕ್ಷ ಲಕ್ಷ ವಿದ್ಯುತ್‌ ಬಿಲ್‌ ಬರುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇದೀಗ ಕೊಪ್ಪಳ ಜಿಲ್ಲೆಯ ವೃದ್ದೆಗೆ ಬರೋಬ್ಬರಿ 1ಲಕ್ಷ ರೂಪಾಯಿ ಬಿಲ್‌ ಬಂದಿದೆ. ಬಿಲ್‌ ಕಂಡು ವೃದ್ದೆಗೆ ದಿಕ್ಕೇ ತೋಚದಂತಾಗಿದೆ.

ಇದನ್ನೂ ಓದಿ: ರಾಜ್ಯದ ದೇವಾಲಯಗಳಲ್ಲಿ ಇನ್ನು ಮುಂದೆ ಕ್ಯೂ ನಿಲ್ಲಬೇಕಾಗಿಲ್ಲ! – ಹಿರಿಯ ನಾಗರೀಕರಿಗೆ ನೇರ ದರ್ಶನ

ಕೊಪ್ಪಳದ ಭಾಗ್ಯನಗರದಲ್ಲಿ ಸಣ್ಣ ತಗಡಿನ ಶೆಡ್​ನಲ್ಲಿ ವಾಸವಾಗಿರುವ 90 ವಯಸ್ಸಿನ ಗೀರಿಜಮ್ಮ ಮನೆಯಲ್ಲಿ ಎರಡು ಬಲ್ಬ್ ಇವೆ. ಆದರೂ 6 ತಿಂಗಳಲ್ಲಿ ಬರೋಬ್ಬರಿ 1 ಲಕ್ಷ ರೂ. ಬಿಲ್​ ಬಂದಿದೆ. ಈ ಅಜ್ಜಿ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದರು. ಹೀಗಾಗಿ ಜೆಸ್ಕಾಂ, ಪ್ರತಿ 70 ರಿಂದ 80 ರೂ ಬೀಲ್ ನೀಡುತ್ತಿತ್ತು. ಆದ್ರೆ, ಆರು ತಿಂಗಳ ಹಿಂದೆ ವೃದ್ದೆಯ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಸಿದ್ದು, ಇದೀಗ 6 ತಿಂಗಳಲ್ಲಿ ಅಜ್ಜಿ ಮನೆಗೆ ಬರೋಬ್ಬರಿ 1,03,315 ರೂ. ವಿದ್ಯುತ್ ಬಿಲ್ ನೀಡಲಾಗಿದೆ. ಒಂದೊತ್ತಿನ ಊಟಕ್ಕೆ ಪರದಾಡುವ 90 ರ್ಷದ ಅಜ್ಜಿ, ಇದೀಗ 1 ಲಕ್ಷ ರೂ. ವಿದ್ಯುತ್ ಬಿಲ್ ಹೇಗೆ ಕಟ್ಟುವುದು ಎಂದು ಕಣ್ಣೀರಿಟ್ಟಿದ್ದಾಳೆ.

ಗೀರಿಜಮ್ಮ ಮನೆಗೆ ಒಂದು ಲಕ್ಷ ವಿದ್ಯುತ್‌ ಬಿಲ್‌ ಬಂದಿರುವ ಬಗ್ಗೆ ಇಂಧನ ಸಚಿವ ಕೆ.ಜೆ ಜಾರ್ಜ್‌ ಪ್ರತಿಕ್ರಿಯಿಸಿದ್ದಾರೆ. ಕೊಪ್ಪಳದಲ್ಲಿ ಅಜ್ಜಿ ಮನೆಗೆ 1 ಲಕ್ಷ ರೂ. ಕರೆಂಟ್​ ಬಿಲ್​ ಬಂದಿದೆ. ಮೀಟರ್​ ಸಮಸ್ಯೆಯಿಂದ 1 ಲಕ್ಷ ರೂ. ಕರೆಂಟ್​ ಬಿಲ್​ ಬಂದಿದೆ. ಅಜ್ಜಿ‌ ಅಷ್ಟೊಂದು ಕರೆಂಟ್​​ ಬಿಲ್​​ ಕಟ್ಟಬೇಕಿಲ್ಲ ಎಂದು ಹೇಳಿದ್ದಾರೆ.

ಗೀರಿಜಮ್ಮ ಮನೆಗೆ ಜೆಸ್ಕಾಂ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜೇಶ್​​ ಭೇಟಿ ನೀಡಿದ್ದಾರೆ. 2021ರಿಂದ ಮೀಟರ್ ರೀಡಿಂಗ್ ತೊಂದರೆಯಿಂದ ಬಿಲ್ ಬಂದಿದೆ. ಅಜ್ಜಿ ಗಿರಿಜಮ್ಮ ವಿದ್ಯುತ್​​ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಸಿಬ್ಬಂದಿ ಹಾಗೂ ಬಿಲ್ ಕಲೆಕ್ಟರ್ ತಪ್ಪಿನಿಂದಾಗಿ ಹೀಗಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ. ಇಂತಹ ಯಾವುದೇ ಪ್ರಕರಣಗಳಿದ್ದರೂ ನಮ್ಮ ಗಮನಕ್ಕೆ ತನ್ನಿ ಎಂದು ಕೊಪ್ಪಳ ಜೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜೇಶ್​​ ಸ್ಪಷ್ಟನೆ ನೀಡಿದ್ದಾರೆ.

suddiyaana