ಆದಿಪುರುಷ್ ವಿವಾದ – ಭಾರತೀಯ ಚಲನಚಿತ್ರಗಳು ಕಠ್ಮಂಡುವಿನಲ್ಲಿ ಬ್ಯಾನ್!
ಟಾಲಿವುಡ್ ನಟ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಆದಿಪುರುಷ್ ಜೂನ್ 16 ರಂದು ರಿಲೀಸ್ ಆಗಿದೆ. ಈ ಚಿತ್ರ ಬಿಡುಗಡೆಯಾದ ದಿನದಿಂದಲೇ ಒಂದಿಲ್ಲೊಂದು ವಿವಾದಗಳಿಂದಲ್ಲೇ ಹೆಚ್ಚು ಸದ್ದು ಮಾಡುತ್ತಿದೆ. ಆದಿಪುರುಷ್ ಸಿನಿಮಾದಲ್ಲಿ ಹಲವು ಡೈಲಾಗ್ಗಳು ಅನುಚಿತವಾಗಿವೆ, ಗ್ರಾಫಿಕ್ಸ್ ಕೆಟ್ಟದಾಗಿದೆ ಎಂದು ಜನರು ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಆದಿಪುರುಷ್ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: ಮೆಗಾ ಸ್ಟಾರ್ ಕುಟುಂಬಕ್ಕೆ ರಾಜಕುಮಾರಿ ಆಗಮನ – ರಾಮ್ ಚರಣ್, ಉಪಾಸನಾ ದಂಪತಿಗೆ ಹೆಣ್ಣು ಮಗು
ಒಂದೆಡೆ ‘ಆದಿಪುರುಷ್’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಇನ್ನೊಂದೆಡೆ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಆದಿಪುರುಷ್ ಸಿನಿಮಾದಲ್ಲಿ ಸೀತೆ ಭಾರತದ ಮಗಳು ಎಂಬ ಸಂಭಾಷಣೆ ಇದೆ. ಆದರೆ ಈ ಸಂಭಾಷಣೆಯನ್ನು ತೆಗೆಯುವಂತೆ ಕೆಲ ದಿನಗಳ ಹಿಂದೆ ನೇಪಾಳ ಸಿನಿಮಾ ಸೆನ್ಸಾರ್ ಬೋರ್ಡ್ ಸಿನಿಮಾದ ನಿರ್ಮಾಣ ಸಂಸ್ಥೆಗೆ ಸೂಚಿಸಿತ್ತು. ಇಲ್ಲವಾದಲ್ಲಿ ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಅದರಂತೆ ಕಠ್ಮಂಡುವಿನಲ್ಲಿ ಚಿತ್ರವನ್ನು ಬ್ಯಾನ್ ಮಾಡಲಾಗಿದೆ.
ಆದಿಪುರುಷ್ ಚಿತ್ರ ಸೇರಿದಂತೆ ಭಾರತದ ಯಾವ ಸಿನಿಮಾಗಳನ್ನು ಪ್ರದರ್ಶನ ಮಾಡಬಾರದು ಎಂದು ಅಲ್ಲಿನ ಮೇಯರ್ ಬಲೇನ್ ಶಾ ಆದೇಶ ಹೊರಡಿಸಿದ್ದಾರೆ. ಕಠ್ಮಂಡುವಿನಲ್ಲಿರುವ 17 ಚಿತ್ರಮಂದಿರಗಳಲ್ಲಿ ಭಾರತದ ಯಾವ ಚಲನಚಿತ್ರಗಳನ್ನು ಪ್ರದರ್ಶಿಸಬಾರದು ಎಂಬ ಆದೇಶವನ್ನು ನೀಡಲಾಗಿದೆ ಎಂದು ಬಲನ್ ಶಾ ಟ್ವೀಟ್ ಮಾಡಿದ್ದಾರೆ.
ಸೀತೆ ಭಾರತದ ಮಗಳು ಎಂಬ ಸಂಭಾಷಣೆಯನ್ನು ಭಾರತದಲ್ಲಿ ಮಾತ್ರವೇ ಅಲ್ಲದೆ ಎಲ್ಲೆಡೆ ಪ್ರದರ್ಶಿತವಾಗುತ್ತಿರುವ ಆವೃತ್ತಿಗಳಿಂದಲೂ ತೆಗೆದಿಲ್ಲದ ಕಾರಣ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಜರುಗಿಸಲಾಗಿದೆ ಎಂದು ಕಠ್ಮಂಡುವಿನ ಮೇಯರ್ ಬಲನ್ ಶಾ ತಿಳಿಸಿದ್ದಾರೆ.