ಮುಂಗಾರು ಮಳೆ ವಿಳಂಬದಿಂದಾಗಿ ನೀರಿನ ಅಭಾವ – ತುಂಗಭದ್ರಾ ಜಲಾಶಯದಲ್ಲಿ ನೀರು ಉಳಿಸಲು ಸೆಕ್ಷನ್ 144 ಜಾರಿ
ರಾಜ್ಯದಲ್ಲಿ ಬಿಸಿಲ ನಡುವೆಯೂ ತುಂತುರು ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣದೊಂದಿಗೆ ಚಳಿಯೂ ಇದೆ. ಆದರೆ ಮಳೆಗಾಲದ ಲಕ್ಷಣ ಮಾತ್ರ ಗೋಚರಿಸುತ್ತಿಲ್ಲ. ಮುಂಗಾರು ಮಳೆ ವಿಳಂಬವಾಗುತ್ತಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಲಕಂಟಕ ಎದುರಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರಗಾಲದ ಆತಂಕ ಮೂಡಿದೆ. ಇದೀಗ ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಉಳಿಸಲು ರಾಯಚೂರಿನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆಗೆ ಮೊದಲ ದಿನ 55,000ಕ್ಕೂ ಹೆಚ್ಚು ಗ್ರಾಹಕರಿಂದ ಅರ್ಜಿ – ಆರಂಭದಲ್ಲೇ ಕಾಣಿಸಿಕೊಂಡ ಸರ್ವರ್ ಬಿಜಿ ಸಮಸ್ಯೆ
ಪ್ರಸಕ್ತ ಸಾಲಿನ ಮುಂಗಾರು ಮಳೆ ವಿಳಂಬವಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿನ ಅಭಾವವೂ ಹೆಚ್ಚಾಗಿದೆ. ಇದೀಗ ಉತ್ತರ ಕರ್ನಾಟಕದಲ್ಲಿ ನೀರಿನ ಅಭಾವ ಹೆಚ್ಚಾದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾಡಳಿತ ಜೂನ್ 17ರಿಂದ 27ರವರೆಗೆ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಾಲುವೆ ಮೂಲಕ ನಗರಕ್ಕೆ ನೀರು ಹರಿಸುತ್ತಿದೆ.
ತುಂಗಭದ್ರಾ ಅಣೆಕಟ್ಟಿನಿಂದ ತುಂಗಭದ್ರಾ ಎಡದಂಡೆ ಕಾಲುವೆಗೆ (ಟಿಎಲ್‌ಬಿಸಿ) ನೀರು ಬಿಡುವ ಮುನ್ನವೇ ನಾಲೆಯಿಂದ ನೀರು ಹರಿಸುವುದನ್ನು ತಡೆಯಲು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಪ್ರಸ್ತುತ ಕೃಷ್ಣಾ ನದಿಯಿಂದ ರಾಯಚೂರು ನಗರಕ್ಕೆ ಐದು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಬಿಕ್ಕಟ್ಟು ನಿವಾರಿಸಲು ತುಂಗಭದ್ರಾ ಜಲಾಶಯದಿಂದ ಕಾಲುವೆ ಮೂಲಕ ನೀರು ಹರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಈ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯ್ಕ ಮಾತನಾಡಿದ್ದು, ಅಣೆಕಟ್ಟಿನಿಂದ ಬಿಡುಗಡೆಯಾಗುವ ನೀರು ಟಿಎಲ್‌ಬಿಸಿ ಮೂಲಕ ಸುಮಾರು 130 ಮೈಲುಗಳವರೆಗೆ ಹರಿಯುತ್ತದೆ. ಮೊದಲು ಬಂಗಾರಪ್ಪ ಕೆರೆಯಲ್ಲಿರುವ ಬ್ಯಾಲೆನ್ಸಿಂಗ್ ಜಲಾಶಯದಲ್ಲಿ ನೀರು ಸಂಗ್ರಹಗೊಂಡು ನಂತರ ರಾಂಪುರ ಕೆರೆ ಜಲಾಶಯಕ್ಕೆ ಹರಿಸಲಾಗುವುದು. ನಂತರ ರಾಯಚೂರು ನಗರಕ್ಕೆ ಕುಡಿಯುವ ಉದ್ದೇಶಕ್ಕೆ ನೀರು ಬಿಡಲಾಗುವುದು. ಈ ವೇಳೆ ಗಸ್ತು ತಿರುಗಲು ಎಂಜಿನಿಯರ್‌ಗಳನ್ನು ನಿಯೋಜಿಸಿದ್ದರೂ, ಜನರು ಗೇಜ್ ಗಳನ್ನು ಬಳಸಿ ನೀರು ತಿರುಗಿಸುವ ಸಾಧ್ಯತೆಗಳಿವೆ. ಹೀಗಾಗಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.