ಆಧಾರ್ ಕಾರ್ಡ್ ಹಿಡಿದು ಪ್ರವಾಸಿ ತಾಣಗಳಿಗೆ ಟ್ರಿಪ್ – ಮಹಿಳೆಯರ ಜೋಶ್ ಗೆ KSRTC ಬಸ್ ಗಳು ಫುಲ್ ರಶ್

ಆಧಾರ್ ಕಾರ್ಡ್ ಹಿಡಿದು ಪ್ರವಾಸಿ ತಾಣಗಳಿಗೆ ಟ್ರಿಪ್ – ಮಹಿಳೆಯರ ಜೋಶ್ ಗೆ KSRTC ಬಸ್ ಗಳು ಫುಲ್ ರಶ್

ಕಾಲೇಜಿಗೆ ಹೋಗೋರಿಗೂ ಫ್ರೀ. ಕೆಲಸಕ್ಕೆ ಹೋಗೋರಿಗೂ ಉಚಿತ. ತವರು ಮನೆ, ದೇವಸ್ಥಾನ, ಪ್ರವಾಸ, ಶಾಪಿಂಗ್, ಆಸ್ಪತ್ರೆ ಹೀಗೆ ಮಹಿಳೆಯರು ರಾಜ್ಯದಲ್ಲಿ ಎಲ್ಲಿಗೇ ಪ್ರಯಾಣಿಸಿದರೂ ಫ್ರೀ ಟಿಕೆಟ್. ಈ ಅವಕಾಶವನ್ನ ಸಖತ್ತಾಗೇ ಬಳಸಿಕೊಳ್ತಿರುವ ನಮ್ಮ ಮಹಿಳೆಯರು ಭರ್ಜರಿ ಟ್ರಿಪ್ ಮಾಡುತ್ತಿದ್ದಾರೆ. ಸಾರಿಗೆ ಬಸ್ ಗಳು ತುಂಬಿ ತುಳುಕುತ್ತಿವೆ.

ರಾಜ್ಯ ಸರ್ಕಾರ ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡುವ ಮೂಲಕ ಮಹಿಳೆಯರ ಫ್ರೀ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದೀಗ ಯೋಜನೆ ಶುರುವಾದ ಬಳಿಕ ಮೊದಲನೇ ವೀಕೆಂಡ್ ಬಂದಿದ್ದು, ಎಲ್ರೂ ಕೂಡ ಟ್ರಿಪ್ ಹೋಗ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಂತೂ (KSRTC Bus) ಕಾಲಿಡಲು ಸಾಧ್ಯವಾಗದಷ್ಟು ಫುಲ್ ರಶ್ ಆಗಿದೆ.

ಇದನ್ನೂ ಓದಿ : ಫ್ರೀ ಬಸ್‌ ಟಿಕೆಟ್‌ ಎಫೆಕ್ಟ್‌: ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಸರ್ವರ್‌ ಡೌನ್‌ – ಟಿಕೆಟ್‌ ಬುಕ್‌ ಆಗದಿದ್ರೂ ಹಣ ಕಟ್‌!

ರಾಜ್ಯದ ವಿವಿಧ ಭಾಗಗಳಿಗೆ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಒಂದು ಬಸ್‌ನಲ್ಲಿ ಸೀಟ್ ಭರ್ತಿಯಾದರೆ ಅದರಿಂದ ಇಳಿದು ಇನ್ನೊಂದು ಬಸ್ ಹತ್ತುತ್ತಿದ್ದಾರೆ. ಮಹಿಳಾ ಪ್ರಯಾಣಿಕರು ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಕುಳಿತಿದ್ದು, ಇವರಲ್ಲಿ ಹೆಚ್ಚಿನವರು ಸಿಗಂದೂರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳುವವರು ಇದ್ದಾರೆ. ನಾಳೆ ಭಾನುವಾರ ಆಗಿರುವುದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಪ್ರಯಾಣ ಮಾಡುತ್ತಿದ್ದಾರೆ. ಬೆಂಗಳೂರು ಬಸ್ ಡಿಪೋದಿಂದ ಧರ್ಮಸ್ಥಳಕ್ಕೆ 10 ನಿಮಿಷಕ್ಕೆ ಒಂದರಂತೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವ 5:30ರಿಂದಲೇ ಸಾವಿರಾರು ಪ್ರಯಾಣಿಕರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹಾಸನ, ಕುಣಿಗಲ್, ಮಾಗಡಿ, ಚಿಕ್ಕಮಗಳೂರು, ಮಂಗಳೂರು ಡಿಪೋ ಸೇರಿದಂತೆ ರಾಜ್ಯಾದ್ಯಂತ 15ಕ್ಕೂ ಹೆಚ್ಚು ಡಿಪೋ ಬಸ್‌ಗಳು ಧರ್ಮಸ್ಥಳಕ್ಕೆ ತೆರಳಿವೆ.

ಫ್ರೀ ಬಸ್ ಹಿನ್ನೆಲೆ ಆದಿಯೋಗಿ ಶಿವನ ಪ್ರತಿಮೆ ನೋಡಲು ಪ್ರವಾಸಿಗರ ದಂಡು ಚಿಕ್ಕಬಳ್ಳಾಪುರಕ್ಕೆ ಹರಿದಿದೆ. ವೀಕೆಂಡ್ ಹಿನ್ನೆಲೆ ಮೈಸೂರಿನ ಕಡೆಗೂ ಹೋಗುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಬಸ್‌ಗಳಲ್ಲಿ ಮಹಿಳೆಯರೇ ಹೆಚ್ಚಾಗಿದ್ದರೂ ಅದರಲ್ಲೂ ಹೆಚ್ಚಿನ ವಿದ್ಯಾರ್ಥಿಗಳೇ ತೆರಳುತ್ತಿದ್ದಾರೆ. ಮೈಸೂರು, ನಂಜನಗೂಡು, ಮಲೆಮಹದೇಶ್ವರ ದೇವಾಲಯದ ಕಡೆಗೆ ಮಹಿಳಾ ಪ್ರಯಾಣಿಕರು ಹೆಚ್ಚಾಗಿದ್ದಾರೆ.

suddiyaana