ಇನ್ಮುಂದೆ ಮಾತೃ ಭಾಷೆಯಲ್ಲೂ ಹಣ ವರ್ಗಾವಣೆ! – AI4Bharat ನಿಂದ ಶೀಘ್ರವೇ ಹೊಸ ಸೇವೆ
ಕೈಯಲ್ಲಿ ಸ್ಮಾರ್ಟ್ ಫೋನ್ ಇರುವ ಪ್ರತಿಯೊಬ್ಬರಿಗೂ ಆನ್ ಲೈನ್ ಹಣದ ವಹಿವಾಟಿನ ಬಗ್ಗೆ ತಿಳಿದಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ಯುಪಿಐ ಮೂಲಕವೂ ಹಣ ಪಾವತಿ ಮಾಡುತ್ತಿದ್ದಾರೆ. ಒಂದು ರೂಪಾಯಿ ಚಾಕಲೇಟ್ ಖರೀದಿಸಿದರೂ ಕೂಡ ಆನ್ಲೈನ್ನಲ್ಲೇ ಹಣ ಪಾವತಿ ಮಾಡುತ್ತಾರೆ. ಬಹುತೇಕ ಜನರು ಹಣ ಬಳಸುವುದನ್ನೇ ನಿಲ್ಲಿಸಿದ್ದಾರೆ. ಈ ಆನ್ಲೈನ್ ಪೇಮೆಂಟ್ ಇಷ್ಟು ದಿನ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಿತ್ತು. ಸದ್ಯದಲ್ಲೇ ಮಾತೃಭಾಷೆಯಲ್ಲೂ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ: ಉಚಿತವಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡುವ ಗಡುವು ವಿಸ್ತರಣೆ – ಸೆ. 14ರವರೆಗೆ ಅಪ್ಡೇಟ್ ಮಾಡಲು ಕಾಲಾವಕಾಶ
ಆನ್ ಲೈನ್ ಪೇಮೆಂಟ್ ಬಂದ ಮೇಲೆ ಜನ ಕೈಯಲ್ಲಿ ಹಣ ಹಿಡಿದುಕೊಂಡು ಓಡಾಡುವುದನ್ನೇ ಮರೆತುಬಿಟ್ಟಿದ್ದಾರೆ. ಮೊಬೈಲ್ ಇದೆ ಅಲ್ವಾ, ಕ್ಯಾಶ್ ಯಾಕೆ ಅಂತಾ ಎಲ್ಲೆಂದರಲ್ಲಿ ಓಡಾಡುತ್ತಿದ್ದರು. ಆದರೆ ಇಷ್ಟು ದಿನ ಇಂಗ್ಲಿಷ್ ನಲ್ಲಿ ಮಾತ್ರ ಆನ್ಲೈನ್ ಪೇಮೆಂಟ್ ಲಭ್ಯ ಇತ್ತು. ಆನ್ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಇನ್ನಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಎಐ4ಭಾರತ್ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ(ಎನ್ಪಿಸಿಐ) ಅಭಿವೃದ್ಧಿಪಡಿಸುತ್ತಿದೆ. ಇದರಿಂದಾಗಿ ಆನ್ಲೈನ್ ಪೇಮೆಂಟ್ ಆಪ್ಗಳನ್ನು ಮಾತೃಭಾಷೆಯಲ್ಲೂ ಉಪಯೋಗಿಸಬಹುದು. ಒಂದು ವೇಳೆ, ಈ ಸೌಲಭ್ಯ ಜಾರಿಗೆ ಬಂದರೆ ದೇಶದ ಅತ್ಯಂತ ಸಾಮಾನ್ಯ ವ್ಯಕ್ತಿಗೂ ಹಣ ವರ್ಗಾವಣೆ ವ್ಯವಸ್ಥೆ ಸುಲಭವಾಗಲಿದೆ ಮತ್ತು ಈಗಿನ ಕೆಲವು ತಾಂತ್ರಿಕ ಕಸರತ್ತುಗಳಿಗೆ ವಿದಾಯ ಸಿಗಲಿದೆ.
ಯುನಿಫೈಡ್ ಪೇಮೆಂಟ್ಸ್ ಕಾರ್ಪೊರೇಷನ್(ಯುಪಿಐ) ಸೇರಿದಂತೆ ವಿವಿಧ ಪಾವತಿ ಗೇಟ್ವೇಗಳನ್ನು ಬಳಸುವ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಇದರಿಂದ ಉಪಯೋಗವಾಗಲಿದೆ. ಭಾರತೀಯ ಎಲ್ಲಾ ಪ್ರಮುಖ ಭಾಷೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಐವಿಆರ್ಎಸ್ ಅನ್ನು ಚೆನ್ನೈನಲ್ಲಿರುವ ಐಐಟಿ ಮದ್ರಾಸ್ನ ಲ್ಯಾಂಗ್ವೇಜ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸೆಂಟರ್ (ಭಾಷೆಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ ಕೇಂದ್ರ)ನಲ್ಲಿ ಎನ್ಪಿಸಿಐ ಸಹಯೋಗದಲ್ಲಿ ಎಐ4ಭಾರತ್ ಅಭಿವೃದ್ಧಿಪಡಿಸುತ್ತಿದೆ.
ಪ್ರಸ್ತುತ ಸ್ಮಾರ್ಟ್ ಫೋನ್ನ ಹೆಚ್ಚಿನ ಬಳಕೆದಾರರು ಕ್ಯೂಆರ್ ಕೋಡ್ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಐವಿಆರ್ಎಸ್ ತಂತ್ರಜ್ಞಾನ ಸಪೋರ್ಟ್ ಮಾಡುವ ಸ್ಮಾರ್ಟ್ ಫೋನ್ಗಳಲ್ಲಿ ಮಾತ್ರ ಮಾತೃಭಾಷೆಯಲ್ಲಿ ಸೂಚನೆ ನೀಡುವ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ. ಇದರ ಪ್ರಾಯೋಗಿಕ ಪರೀಕ್ಷೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತದೆ ಎಂದು ವರದಿಯಾಗಿದೆ.