ಆಸ್ಕರ್ ಪ್ರಶಸ್ತಿ ಮೂಲಕ ವಿಶ್ವದಾದ್ಯಂತ ಗಮನಸೆಳೆದ ಜೋಡಿ – ಸೂರಿಗಾಗಿ ನೆರವಿಗೆ ಕಾಯುತ್ತಿದ್ದಾರೆ ಬೆಳ್ಳಿ ಬೊಮ್ಮನ್
ಪ್ರತಿಷ್ಠಿತ ಪ್ರಶಸ್ತಿ ಬಂದಾಗ ಪ್ರಧಾನಿ ಮೋದಿಯಿಂದಲೂ ಅಭಿನಂದನೆ – ಯಾರಿಗೂ ಕಾಣಿಸಿಲ್ಲವೇ ಸೂರಿಲ್ಲದ ಬೆಳ್ಳಿ ಬೊಮ್ಮನ್ ವ್ಯಥೆ
ಬೆಳ್ಳಿ, ಬೊಮ್ಮನ್ ಈ ಹೆಸರು ಕೇಳಿದಾಕ್ಷಣ ನೆನಪಾಗೋದು ದಿ ಎಲಿಫೆಂಟ್ ವಿಸ್ಪರರ್ಸ್ಸ್ ಕಿರುಚಿತ್ರ. ಇದರಲ್ಲಿರುವ ಮುದ್ದಾದ ಪುಟಾಣಿ ಆನೆ. ಆನೆ ಜೊತೆಗೆ ದಂಪತಿಯ ಭಾಂದವ್ಯ. ಜನ್ಮ ನೀಡದಿದ್ದರೂ ಜೀವ ಕೊಡುವಂಥಾ ಭಾಂದವ್ಯ ಆನೆ ಹಾಗೂ ಈ ದಂಪತಿ ಮಧ್ಯೆ ಇತ್ತು. ಕಾಡಲ್ಲಿ ಹುಟ್ಟಿದ ಆನೆಗೆ ನಾಡಿನ ದಂಪತಿ ಆಸರೆಯಾಗಿ ಮನೆ ಮಗನಂತೆ ಸಾಕಿದ್ರು. ಅನಾಥವಾಗಿದ್ದ ಕಾಡಾನೆ ಮರಿಗೆ ಅಮ್ಮನ ಪ್ರೀತಿ ಕೊಟ್ಟು ಬೆಳೆಸಿದ್ದರು. ಇದೇ ನಿಶ್ಕಲ್ಮಶ ಪ್ರೇಮಕ್ಕೆ ಇಡೀ ಜಗತ್ತೇ ತಲೆಬಾಗಿತ್ತು. ತಮ್ಮ ಈ ಕಾರ್ಯಕ್ಕೆ ಶಹಬ್ಬಾಸ್ ಗಿರಿ ಲಭಿಸಿತ್ತು. ಆದರೆ ಈಗ ಈ ಜೋಡಿಯ ವ್ಯಥೆಯನ್ನು ಕೇಳುವವರಿಲ್ಲ. ದಿ ಎಲಿಫೆಂಟ್ ವಿಸ್ಪರರ್ಸ್ಸ್ ಖ್ಯಾತಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪುರಸ್ಕೃತ ದಂಪತಿ ತಮ್ಮ ಸೂರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಕ್ಕೆ ‘ಆಸ್ಕರ್’ ಗರಿ – ಆನೆ ಮತ್ತು ದಂಪತಿ ನಡುವಿನ ಬಂಧಕ್ಕೆ ಶ್ರೇಷ್ಠ ಪ್ರಶಸ್ತಿ!
ಹೌದು.. ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದಾಗ ವಿಶ್ವದ ಉದ್ದಗಲಕ್ಕೂ ಈ ದಂಪತಿಯ ಬಗ್ಗೆಯೇ ಮಾತು. ನಿಷ್ಕಲ್ಮಶ ಸೇವೆಗೆ ಕೋಟ್ಯಂತರ ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರವೇ ಹರಿದುಬಂದಿತ್ತು. ಅಂದು ಇಡೀ ವಿಶ್ವವೇ ಈ ದಂಪತಿಯನ್ನು ಕೊಂಡಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ಗಣ್ಯರು ಈ ದಂಪತಿಯನ್ನು ಭೇಟಿಯಾಗಿ ಅಭಿನಂದಿಸಿದ್ದರು. ಆದರೆ ಈಗ ಬೆಳ್ಳಿ, ಬೊಮ್ಮನ್ ದಂಪತಿಯ ನೋವನ್ನು ಕೇಳುವವರಿಲ್ಲ. ತಮ್ಮ ಕಷ್ಟಕ್ಕೆ ನೆರವಾಗುವವರಿಲ್ಲ. ನಾವು ಕಷ್ಟದಲ್ಲಿದ್ದೇವೆ. ಸೂರಿಲ್ಲ ನಮಗೆ ಸಹಾಯ ಮಾಡಿ ಎಂದು ಸತಃ ಬೆಳ್ಳಿ ಬೊಮ್ಮನ್ ದಂಪತಿ ಅಂಗಲಾಚುತ್ತಿದ್ದಾರೆ.
ಇತ್ತೀಚೆಗೆ ತುಮಕೂರು ಜಿಲ್ಲೆಯ ಶಿರಾದ ವರ್ದಮಾನ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗಿತ್ತು. ಈ ವೇಳೆ ಬೆಳ್ಳಿ ಬೊಮ್ಮನ್ ಅವರ ಸಾಧನೆಯನ್ನು ಗುರುತಿಸಿ ಇವರನ್ನ ಸನ್ಮಾನಿಸಿ ಗೌರವಿಸಬೇಕೆಂದು ಶಾಲಾ ಆಡಳಿತ ಮಂಡಳಿ ಕರೆಸಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಇವರ ಸಾಧನೆಯನ್ನ ಮಕ್ಕಳಿಗೆ ತಿಳಿಸಿ, ಅವರೊಟ್ಟಿಗೆ ಸಂವಾದ ಕಾರ್ಯಕ್ರಮ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಬೊಮ್ಮನ್ ಅವರು ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ. ನಮಗೆ ಮನೆಯಿಲ್ಲ. ಮನೆ ನಿರ್ಮಿಸಿಕೊಡಲು ಸಹಾಯ ಮಾಡಿ ಅಂತಾ ಎಂದು ಮನವಿ ಮಾಡಿದ್ದಾರೆ. ಶಿರಾದ ಜನರು ಇವರ ಮನವಿಗೆ ಕರಗಿ ಇಂದು ಸಾಕಷ್ಟು ಸಹಾಯ ಮಾಡಿದ್ದಾರೆ. ವರ್ದಮಾನ್ ಶಾಲೆಯ ಮುಖ್ಯಸ್ಥ ಸಂಜಯ್ ಅವರು ಒಂದು ವಾರದಲ್ಲಿ ಖುದ್ದಾಗಿ ಮುದುಮಲೈಗೆ ತೆರಳಿ ಇವರ ಸೂರಿಗೆ ಬೇಕಾದ ಸಹಾಯ ಮಾಡೋದಾಗಿ ಬೆಳ್ಳಿಬೊಮ್ಮನ್ ದಂಪತಿಗಳಿಗೆ ಭರವಸೆ ನೀಡಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ಆಸ್ಕರ್ ಪ್ರಶಸ್ತಿ ಪಡೆಯುತ್ತಿದ್ದಂತೆ ಅನೇಕ ಮಂದಿ ಈ ದಂಪತಿಗೆ ಅಭಿನಂದನೆ ಸಲ್ಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಇವರಿಬ್ಬರನ್ನು ಅಭಿನಂದಿಸಿದ್ದರು. ಈ ವೇಳೆ ದಂಪತಿಗೆ ಸಾಕಷ್ಟು ಭರವಸೆ ಸಿಕ್ಕಿತ್ತು. ಅಷ್ಟೇ ಅಲ್ಲದೇ ಇವರಿಗೆ ಒಂದು ಲಕ್ಷ ಬಹುಮಾನ ನೀಡೋ ಮೂಲಕ ತಮಿಳುನಾಡಿನ ಸ್ಟಾಲಿನ್ ಸರ್ಕಾರ ಕೈತೊಳೆದುಕೊಂಡಿದೆ. ಅಂದು ವಿಶ್ವದಾದ್ಯಂತ ಗಮನ ಸೆಳೆದಿದ್ದ ಜೋಡಿ ಇಂದು ನೆರವು ಕೇಳುತ್ತಿರುವುದು ವಿಪರ್ಯಾಸ.