ಬಾಳಸಂಗಾತಿ ಸಿಗದೇ ಜಿಗುಪ್ಸೆ.. ಸರ್ಕಾರಿ ನೌಕರಿ ಇಲ್ಲದವರಿಗೆ ಕನ್ಯಾಭಾಗ್ಯ ಜಾರಿಗೊಳಿಸಿ – ಸರ್ಕಾರಕ್ಕೆ ಪತ್ರ ಬರೆದ ಯುವಕ

ಬಾಳಸಂಗಾತಿ ಸಿಗದೇ ಜಿಗುಪ್ಸೆ.. ಸರ್ಕಾರಿ ನೌಕರಿ ಇಲ್ಲದವರಿಗೆ ಕನ್ಯಾಭಾಗ್ಯ ಜಾರಿಗೊಳಿಸಿ – ಸರ್ಕಾರಕ್ಕೆ ಪತ್ರ ಬರೆದ ಯುವಕ

ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಅನ್ನುವುದು ಯುವಕರ ಗೋಳಾಗಿದೆ. ಕಾರು, ಬೈಕು, ಜಮೀನು ಇದೆ. ಲಕ್ಷ ಲಕ್ಷ ಸಂಪಾನೆಯೂ ಮಾಡುತ್ತಿದ್ದೇವೆ ಎಂದರೂ ಯಾರು ಹುಡುಗಿ ಕೊಡಲು ಮುಂದಾದುತ್ತಿಲ್ಲ ಎನ್ನುವುದು ಅವಿವಾಹಿತ ಯುವಕರ ಅಳಲಾಗಿದೆ. ಇದೀಗ ಇಲ್ಲೊಬ್ಬ ವ್ಯಕ್ತಿ ಸತತ ಏಳು ವರ್ಷದಿಂದ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾನೆ. ಆದರೂ ಕೂಡ ಆತನಿಗೆ ಹುಡುಗಿ ಸಿಕ್ಕಿಲ್ಲವಂತೆ. ಹುಡುಗಿ ಹುಡುಕಿ ಜಿಗುಪ್ಸೆಗೊಂಡಿರುವ ಯುವಕನೊಬ್ಬ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕನ್ಯೆ ಹುಡುಕಿ ಕೊಡಿ ಅಂತಾ ಪತ್ರ ಬರೆದಿದ್ದಾನೆ. ಆತ ಬರೆದಿರುವ ಪತ್ರ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಊಟಕ್ಕೆ ಮಟನ್ ಖಾಲಿಯಾಗಿದ್ದಕ್ಕೆ ತಾಳಿಕಟ್ಟಲ್ಲ ಅಂದ ವರ – ನಿನ್ನನ್ನು ಯಾವ ಕಾರಣಕ್ಕೂ ಮದುವೆಯಾಗಲ್ಲ ಅಂದಳು ಸಿಟ್ಟಿಗೆದ್ದ ವಧು

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಯುವಕ ಮುತ್ತು ಹೂಗಾರ (27) ಕಳೆದ ಏಳು ವರ್ಷದಿಂದ ಕನ್ಯಾನ್ವೇಷಣೆ ನಡೆಸ್ತಿದ್ದಾನೆ. ಹಲವು ಹಳ್ಳಿಗಳಿಗೆ ತೆರಳಿ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾನೆ. ಆದ್ರೆ ಬಹುತೇಕರು ಸರ್ಕಾರಿ ನೌಕರಿ ಇದ್ರೆ ಮಾತ್ರ ಕನ್ಯೆ ನೀಡುತ್ತೇವೆ ಎಂದು ಹೇಳುತ್ತಿದ್ದಾರಂತೆ. ಹುಡುಗಿ ಹುಡುಕಿ ಹುಡುಕಿ ಜಿಗುಪ್ಸೆಗೊಂಡಿರೋ ಮುತ್ತು, ಗ್ರಾಮ ಪಂಚಾಯ್ತಿ ಅಧಿಕಾರಿಗೆ ಪತ್ರ ಬರೆದು ಕನ್ಯಾ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾನೆ.

ಮುತ್ತು ಹೂಗಾರ ಲಿಂಗಾಯತ ಹೂಗಾರ ಸಮಾಜದ ಮುತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾನೆ. ಕುಟುಂಬ ನಿರ್ವಹಿಸುವಷ್ಟು ಸಂಪಾದನೆ ಕೂಡ ಮಾಡುತ್ತಿದ್ದಾನೆ. ಆದರೆ ಸರ್ಕಾರಿ ಕೆಲಸ ಇಲ್ಲ ಎಂಬ ಕಾರಣಕ್ಕೆ ಹೆಣ್ಣು ನೀಡಲು ಯಾರು ಮುಂದೆ ಬರುತ್ತಿಲ್ಲಂತೆ. ಹೀಗಾಗಿ ಸರ್ಕಾರಿ ನೌಕರಿ ಇಲ್ಲದೇ ಕನ್ಯೆ ಹುಡುಕುತ್ತಿರೋರಿಗೆ ಸರ್ಕಾರ ಏನಾದ್ರೂ ಯೋಜನೆ ತರ್ಲಿ ಅನ್ನೋ ಕಾರಣಕ್ಕೆ ಪಿಡಿಒ ಅವರಿಗೆ ಪತ್ರ ಬರೆದಿದ್ದಾನೆ.

ಮುತ್ತು ಹೂಗಾರ ಅವರು ಬರೆದಿರುವ ಪತ್ರದಲ್ಲಿ ಒಬ್ಬನೇ ಮಗ, ವೃತ್ತಿಯಿಂದ ಗುತ್ತಿಗೆದಾರ.. ಸುಮಾರು ವರ್ಷದಿಂದ ಕನ್ಯೆ ಹುಡುಕಿ ಜೀವನದಲ್ಲಿ ಜಿಗುಪ್ಸೆ ಬಂದಿದೆ.. ಜೀವನ ಸಂಗಾತಿಯನ್ನ ಹುಡುಕಲು ಹೋದಾಗ ಸರ್ಕಾರಿ ನೌಕರಿ ಇದ್ದವರಿಗೆ ಮಾತ್ರ ಕನ್ಯೆ ಅಂತಾ ತಿರಸ್ಕಾರ ಮಾಡುತ್ತಿದ್ದಾರೆ.. ದಯಾಳುಗಳಾದ ತಾವು ಯಾವುದೇ ಜಾತಿಯ ಕನ್ಯೆಯಾದ್ರೂ ಸರಿ ಹುಡುಕಿಕೊಡಿ ಅಂತಾ ಮುತ್ತು ಪತ್ರದಲ್ಲಿ ಉಲ್ಲೇಖಿಸಿದ್ದಾರೆ..

ಮುತ್ತು ಹಾಗೂ ಕೆಲ ಸ್ನೇಹಿತರು ಪತ್ರ ಕೊಟ್ಟಿದ್ದಾರೆ. ಆದ್ರೆ, ಕನ್ಯೆ ಹುಡುಕೋದಕ್ಕೆ ಆಗಲ್ಲ. ಶುಭವಾಗ್ಲಿ ಅಂತಾ ಹೇಳಿ ಕಳಿಸಿದ್ದೇವೆ ಎಂದು ಪತ್ರ ಸ್ವೀಕರಿಸಿರುವ ಪಿಡಿಒ ಅನೀಲಗೌಡ ತಿಳಿಸಿದ್ದಾರೆ.

suddiyaana