ಅನ್ನಭಾಗ್ಯ ರಾಜಕೀಯ – ಪ್ರಧಾನಿ ಮೋದಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಿದ್ದ 5 ಕೆ.ಜಿ. ಅಕ್ಕಿಯ ಸರಬರಾಜನ್ನು ನಿಲ್ಲಿಸಲಾಗಿದೆ. ಹೀಗಾಗಿ ಅನ್ನಭಾಗ್ಯ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಉಂಟಾಗಿರುವ ಅಕ್ಕಿಯ ಕೊರತೆಯನ್ನು ಸರಿದೂಗಿಸಲು ತೆಲಂಗಾಣ, ಪಂಜಾಬ್ ರಾಜ್ಯಗಳಿಂದ ಒದಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಮೋದಿ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ನಿರಾಕರಣೆ – ʼಮೋದಿ ಕನ್ನಡಿಗರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆʼ ಎಂದ ಕಾಂಗ್ರೆಸ್
ಸಿಎಂ ಸಿದ್ದರಾಮಯ್ಯ ಅವರು ಜೂ. 21ಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳಿದ್ದಾರೆ. ಈ ವೇಳೆ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಭೇಟಿಗೂ ನಿರ್ಧಾರ ಮಾಡಿದ್ದಾರೆ. ಬಳಿಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಅನ್ನಭಾಗ್ಯ ಅಕ್ಕಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಚಿವ ಕೆ.ಜೆ ಜಾರ್ಜ್ ಅವರು ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ್ದು. ʼರಾಜ್ಯ ಸರ್ಕಾರಕ್ಕೆ ಅನ್ನಭಾಗ್ಯ ಅಕ್ಕಿ ನೀಡಲು ಎಫ್ಸಿಐ ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಬಡವರಿಗೆ ಸಹಾಯ ಮಾಡುವ ವಿಚಾರಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಬೇಕು. ಅವರ ಈ ಧೋರಣೆ ಅವರು ಯಾರ ಪರ ಇದ್ದಾರೆ ಎಂದು ತೋರಿಸುತ್ತೆ. ನಾವು ಪುಕ್ಕಟ್ಟೆ ಕೊಡಿ ಎಂದು ಕೇಳಿಲ್ಲ, ಹಣ ಕೊಡ್ತೀವಿ. ಅದಕ್ಕೆ ಅವರು ನೀಡಬಹುದಿತ್ತು ಎಂದು ಹೇಳಿದ್ದಾರೆ.
ಇನ್ನು ಸಚಿವ ರಾಮಲಿಂಗಾ ರೆಡ್ಡಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ಹತ್ತಿರ ಅಕ್ಕಿ ದಾಸ್ತಾನು ಇರುತ್ತೆ. ಆದರೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ಮಾಡ್ತಿದೆ. ಪಾರ್ಲಿಮೆಂಟ್ ಚುನಾವಣೆಗೆ ಕಾಂಗ್ರೆಸ್ ಪ್ರಬಲ ಆಗುತ್ತೆ ಅಂತ ಭಯ ಅವರಿಗೆ. ಬಿಜೆಪಿ ನಾಯಕರಿಗೆ ಜನರ ಮೇಲೆ ಕಾಳಜಿ ಇದ್ದರೆ ಕೇಂದ್ರಕ್ಕೆ ಹೋಗಿ ಕೇಳಬೇಕಿತ್ತು. ನಮ್ಮ ಸರ್ಕಾರ ಏಳು ಕೆ.ಜಿ ಅಕ್ಕಿ ಕೊಟ್ಟಿರುವುದನ್ನು ಬಿಜೆಪಿ ಸರ್ಕಾರ ಕಡಿಮೆ ಮಾಡಿದ್ರು. ಕೇಂದ್ರ ಸರ್ಕಾರ ಯಾರದು. ನಾವು ಮಾಡುವ ಕಾರ್ಯಕ್ರಮಕ್ಕೆ ಕೇಂದ್ರದ ಜೊತೆಗೆ ಕೇಳಬೇಕಾ? ಬಿಜೆಪಿಯವರು ಯಡಬಿಡಂಗಿಗಳು. ಅವರಿಗೆ ಇದು ಗೊತ್ತಾಗಲ್ಲ. ಸೋಲಿನ ಹತಾಶೆಯಿಂದ ಏನ್ ಮಾತಾಡ್ತಾರೆ ಅಂತ ಅವರಿಗೆ ಗೊತ್ತಾಗಲ್ಲ. ಅವರಿಗೆ ಅವರೇ ಸೋಲಿಸಿದ್ದಾರೆ ಅಂತ ಹತಾಶೆ ಆಗಿದ್ದಾರೆ ಎಂದು ಹೇಳಿದ್ದಾರೆ.