‘ನಾವಿಬ್ಬರೂ ಸಂಬಂಧಿಗಳು.. ರಾಜಕೀಯ ಮಾತನಾಡಿಲ್ಲ’ – ಶಾಮನೂರು ಭೇಟಿ ಬಗ್ಗೆ ಬೊಮ್ಮಾಯಿ ಸ್ಪಷ್ಟನೆ
ರಾಜಕೀಯ ನಾಯಕರು ಏನೇ ಮಾಡಿದ್ರೂ ಸುದ್ದಿಯೇ.. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ವಿಚಾರವೇ ಸಂಚಲನ ಮೂಡಿಸಿದೆ. ಮಂಗಳವಾರ ಸಂಜೆ ದಾವಣಗೆರೆ ಹೊರವಲಯದಲ್ಲಿರುವ ಖಾಸಗಿ ಹೋಟೆಲ್ನ ಕೋಣೆಯೊಂದರಲ್ಲಿ ಉಭಯ ನಾಯಕರು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು 20 ರಿಂದ 25 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ಇದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಸುರ್ಜೇವಾಲ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು – ಕಾಫಿ ಕುಡಿದು ಹೋದೆವು ಅಷ್ಟೇ ಎಂದ ರಾಮಲಿಂಗಾರೆಡ್ಡಿ!
ಮಂಗಳವಾರವಷ್ಟೇ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ಕಾಂಗ್ರೆಸ್ ಹಾಗೂ ಬಿಜೆಪಿಯ ಹಿರಿಯ ನಾಯಕರು ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಉಭಯ ನಾಯಕರ ಭೇಟಿ ಹಿಂದೆ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎಂಬ ಗುಮಾನಿ ಎದ್ದಿದೆ. ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಬಿಜೆಪಿಯ ಮಾಜಿ ಸಿಎಂ ಒಬ್ಬರು ಕಾಂಗ್ರೆಸ್ ಶಾಸಕರನ್ನು ಭೇಟಿಯಾಗುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಇಬ್ಬರ ಭೇಟಿ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆ ಸ್ವತಃ ಬಸವರಾಜ ಬೊಮ್ಮಾಯಿಯವರೇ ಟ್ವಿಟ್ಟರ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸ್ನೇಹ ಸಂಬಂಧಗಳೇ ಬೇರೆ, ರಾಜಕೀಯ ಸಂಬಂಧಗಳೇ ಬೇರೆ. ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು. ಹಲವಾರು ಬಾರಿ ನಾವು, ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಷಯ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ ಊಟ ಮಾಡಲು ಹೋಟೆಲ್ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೋಪರಿ ಮಾತನಾಡಿದ್ದೇನೆ. ಅಲ್ಲಿ ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ. ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ, ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.