ಅಕ್ರಮ ಹಣ ವರ್ಗಾವಣೆ ಪ್ರಕರಣ – ಇಡಿ ಅಧಿಕಾರಿಗಳು ಬಂಧಿಸುತ್ತಿದ್ದಂತೆ ಎದೆನೋವೆಂದು ಕಾರಿನಲ್ಲೇ ಬಿದ್ದು ಒದ್ದಾಡಿದ ಅಬಕಾರಿ ಸಚಿವ!

ಅಕ್ರಮ ಹಣ ವರ್ಗಾವಣೆ ಪ್ರಕರಣ – ಇಡಿ ಅಧಿಕಾರಿಗಳು ಬಂಧಿಸುತ್ತಿದ್ದಂತೆ ಎದೆನೋವೆಂದು ಕಾರಿನಲ್ಲೇ ಬಿದ್ದು ಒದ್ದಾಡಿದ ಅಬಕಾರಿ ಸಚಿವ!

ತಮಿಳುನಾಡು ರಾಜಕೀಯದಲ್ಲಿ ಇವತ್ತು ಸ್ಫೋಟಕ ಬೆಳವಣಿಗೆ ನಡೆದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತಮಿಳುನಾಡು ವಿದ್ಯುತ್ ಮತ್ತು ಅಬಕಾರಿ ಸಚಿವ ವಿ.ಸೆಂಥಿಲ್ ಬಾಲಾಜಿ (V Senthil Balaji) ಅವರನ್ನ ಬಂಧಿಸಿದೆ. ಸೆಂಥಿಲ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ ನಂತರ ಬಂಧಿಸಲಾಗಿದೆ. ಆದರೆ ಅಧಿಕಾರಿಗಳು ಸಚಿವರನ್ನ ಬಂಧಿಸುತ್ತಿದ್ದಂತೆ ಎದೆನೋವು ಎಂದು ಹೇಳಿ ಕಾರಿನಲ್ಲಿ ಕಣ್ಣೀರಿಟ್ಟಿದ್ದಾರೆ. ಭಾರೀ ಹೈಡ್ರಾಮಾದ ಬಳಿಕ ಬುಧವಾರ ಮುಂಜಾನೆ ಅವರನ್ನ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ (Omandurar Government Hospital) ದಾಖಲಿಸಲಾಗಿದೆ.

ಇದನ್ನೂ ಓದಿ : ಬಿಬಿಎಂಪಿ ಅಧಿಕಾರಿಗಳ ಜೊತೆಗಿನ ಸಚಿವರ ಸಭೆಯಲ್ಲಿ ಸುರ್ಜೇವಾಲ ಭಾಗಿ – ‘ಕೈ’ ವಿರುದ್ಧ ಬಿಜೆಪಿ, ಜೆಡಿಎಸ್ ವಾಗ್ಬಾಣ!

ಡಿಎಂಕೆ ನಾಯಕನನ್ನ ಆಸ್ಪತ್ರೆಗೆ ಕರೆತರುತ್ತಿದ್ದಂತೆ ಆಸ್ಪತ್ರೆ ಹೊರಗೂ ಜಮಾಯಿಸಿದ್ದ ಬೆಂಬಲಿಗರು ಭಾರೀ ಹೈಡ್ರಾಮಾ ಮಾಡಿದ್ದಾರೆ. ಇಡಿ ಕ್ರಮ ವಿರೋಧಿಸಿ ಸೆಂಥಿಲ್ ಅವರ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಇತ್ತ ಸೆಂಥಿಲ್ ಕಾರಿನಲ್ಲಿ ಮಲಗಿದ್ದಾಗಲೇ ಎದೆಯನ್ನು ಹಿಡಿದುಕೊಂಡು ನೋವು ಅಂತಾ ಕಣ್ಣೀರಿಟ್ಟಿದ್ದಾರೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸದ್ಯ ಚೆನ್ನೈನ ಓಮಂದೂರರ್ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ನಿಯೋಜಿಸಲಾಗಿದ್ದು, ಸೆಂಥಿಲ್ ಬಾಲಾಜಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.

ಸಚಿವ ಸೆಂಥಿಲ್ ಬಾಲಾಜಿ (V Senthil Balaji) ಅವರನ್ನ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ (MK Stalin) ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.‌ ಇಡಿ ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ ಕೆಲ ಗಂಟೆಗಳಲ್ಲೇ ಭೇಟಿ ಮಾಡಿ ಆರೋಗ್ಯ ಸ್ಥಿತಿಗತಿಯನ್ನ ವೀಕ್ಷಿಸಿದ್ದಾರೆ. ಅಲ್ಲದೇ ಇದು ಬಿಜೆಪಿ ಸೇಡಿನ ರಾಜಕಾರಣ ಎಂದು ಕಿಡಿ ಕಾರಿದ್ದಾರೆ. ಸಚಿವ ವಿ.ಸೆಂಥಿಲ್ ಬಾಲಾಜಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಬುಧವಾರ ಶೋಧ ನಡೆಸಿದ ನಂತರ ಮನಿ ಲಾಂಡರಿಂಗ್ ತಡೆ ಕಾಯ್ದೆ (PMLA) ಅಡಿಯಲ್ಲಿ ಬಂಧಿಸಲು ಮುಂದಾಯಿತು. ಸತತ 24 ಗಂಟೆಗಳ ಕಾರ್ಯಾಚರಣೆ ನಡೆಸಿದ ಇಡಿ ತಂಡ ಮಧ್ಯರಾತ್ರಿ 1:30ರ ಸುಮಾರಿಗೆ ಸಚಿವರನ್ನ ಬಂಧಿಸಲು ಮುಂದಾದಾಗ ತಕ್ಷಣವೇ ಎದು ನೋವು ಕಾಣಿಸಿಕೊಂಡಿತ್ತು. ಕಾರಿನಲ್ಲೇ ಎದೆ ಬಿಗಿಹಿಡಿದುಕೊಂಡು ಅತ್ತು ಗೋಗರೆದಿದ್ದರು. ಆ ನಂತರ ಅವರನ್ನ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೇ ವೇಳೆ ಆಸ್ಪತ್ರೆ ಮುಂಭಾಗ ನೆರೆದಿದ್ದ ಕಾರ್ಯಕರ್ತರು, ತನಿಖಾ ಸಂಸ್ಥೆಯೊಂದಿಗೆ ಸಹಕರಿಸಿದರೂ ಸೆಂಥಿಲ್ ಬಾಲಾಜಿ ಅವರ ಮೇಲೆ ಒತ್ತಡ ಹೇರಲಾಗಿತ್ತು. ಇದೇ ಅವರ ಎದೆ ನೋವಿಗೆ ಕಾರಣ ಎಂದು ರಾಜ್ಯಪಾಲ ಆರ್.ಎನ್ ರವಿ ವಿರುದ್ಧ ದೂರಿದರು. ಸೆಂಥಿಲ್ ಬಾಲಾಜಿ ವಕೀಲರು ಮತ್ತು ಡಿಎಂಕೆ ನಾಯಕ ಎನ್.ಆರ್ ಎಲಾಂಗೋ ಸಹ ಇದು ಸಂಪೂರ್ಣ ಅಸಾಂವಿಧಾನಿಕ ಹಾಗೂ ಕಾನೂನು ಬಾಹಿರವಾದ ಬಂಧನ. ನಾವು ಕಾನೂನಿನ ಮೂಲಕವೇ ಹೋರಾಡುತ್ತೇವೆ ಎಂದು ಗುಡುಗಿದರು.

ತನಿಖಾ ಸಂಸ್ಥೆ ನಡೆಸಿದ ದಾಳಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಹಲವಾರು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರದ ತ ನಿಖಾ ಏಜೆನ್ಸಿಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ದಾಳಿಗಳು ಕೇವಲ ರಾಜಕೀಯ ಪ್ರೇರಿತವಲ್ಲ, ಸೇಡಿನ ರಾಜಕಾರಣದ ಕ್ರಮ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಅಪಮಾನವಾಗಿದೆ. ಪಶ್ಚಿಮ ಬಂಗಾಳ, ದೆಹಲಿಯಂತ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ. ಮೋದಿ (Narendra Modi) ಸರ್ಕಾರವನ್ನು ವಿರೋಧಿಸುವವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ವಿಪಕ್ಷ ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಸೆಂಥಿಲ್‌ ಅವರನ್ನ ಇಡಿ ಬಂಧಿಸಿರುವುದನ್ನ ಖಂಡಿಸಿದ್ದಾರೆ.

suddiyaana