ಬಿಪರ್ ಜಾಯ್ ಚಂಡಮಾರುತದ ಎಫೆಕ್ಟ್ – ಕಡಲ ತೀರಕ್ಕೆ ಅಪ್ಪಳಿಸುತ್ತಿವೆ ರಕ್ಕಸ ಅಲೆಗಳು
ಮಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಇನ್ನೂ ಬಿರುಸು ಪಡೆದಿಲ್ಲ. ಕೆಲವು ಭಾಗಗಳಲ್ಲಿ ಮಾತ್ರ ಸಂಜೆ ವೇಳೆ ಮಳೆಯಾಗುತ್ತಿದೆ. ಆದರೆ ಕರಾವಳಿ ಭಾಗಗಳಲ್ಲಿ ಬಿಪರ್ ಜಾಯ್ ಚಂಡಮಾರುತದ ತೀವ್ರತೆ ಹೆಚ್ಚಾಗುತ್ತಿದೆ. ಚಂಡ ಮಾರುತದ ಅಬ್ಬರಕ್ಕೆ ಕಡಲ್ಕೊರೆತ ತೀವ್ರಗೊಂಡಿದೆ. ಮಳೆ ಬರುವುದಕ್ಕೆ ಮೊದಲೇ ಚಂಡಮಾರುತ ಕಾಣಿಸಿದ್ದರಿಂದ ಕಡಲು ಅಬ್ಬರಿಸತೊಡಗಿದ್ದು ಕಡಲ ಪ್ರದೇಶದ ನಿವಾಸಿಗಳು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.
ಇದನ್ನೂ ಓದಿ: ಮುಂಗಾರು ಮಳೆ ಬೀಳದೆ ಬರಿದಾಯ್ತು ಶರಾವತಿ ಹಿನ್ನೀರು – ಸಿಗಂದೂರು ಲಾಂಚ್ ನಲ್ಲಿ ವಾಹನಗಳಿಗೆ ನಿರ್ಬಂಧ
ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದ ಪರಿಣಾಮ ರಕ್ಕಸ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದಾಗಿ ಮಂಗಳೂರು ಹೊರವಲಯದ ಉಳ್ಳಾಲದ ಬಟ್ಟಂಪಾಡಿ, ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ತೀರ ಪ್ರದೇಶದಲ್ಲಿರುವ ಮನೆಗಳು ಸಮುದ್ರ ಸೇರುತ್ತಿವೆ. ನೂರಾರು ತೆಂಗಿನ ಮರಗಳು ಅಲೆಗಳ ಅಬ್ಬರಕ್ಕೆ ನೆಲಕ್ಕೆ ಉರುಳುತ್ತಿವೆ. ಇದರಿಂದಾಗಿ ತೀರ ಪ್ರದೇಶದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಒಂದು ಕಡೆ ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತಲೇ ಇದೆ. ಇನ್ನೊಂದು ಕಡೆ ಕಡಲ್ಕೊರೆತ ತಪ್ಪಿಸಲು ಕಡಲಿಗೆ ಕಲ್ಲು ಹಾಕುವ ಕಾರ್ಯ ನಡೆಯುತ್ತಲೇ ಇದೆ. ಈ ರೀತಿಯಾಗಿ ಕಲ್ಲುಗಳನ್ನು ಸುರಿದರೆ ಅದು ಪೂರ್ತಿ ಕಡಲು ಸೇರುತ್ತದೆ. ಹಲವು ವರ್ಷಗಳಿಂದ ಸರ್ಕಾರ ಇದನ್ನೇ ಮಾಡುತ್ತಿದೆ ಹೊರತು ಶಾಶ್ವತ ಪರಿಹಾರ ನೀಡುತ್ತಿಲ್ಲ. ಇಂತಹ ಅರೆಬರೆ ಕಾಮಗಾರಿಯ ನಾಟಕ ಬೇಡ ಎಂದು ಸ್ಥಳೀಯರು ಹೇಳುತ್ತಿದ್ದಾರೆ.