ಭಾರತಕ್ಕೆ ಸುನಿಲ್ ಚೆಟ್ರಿ ಗೆಲುವಿನ ಗೋಲು – ತಂದೆಯಾಗುತ್ತಿರುವ ಸಿಹಿಸುದ್ದಿಯನ್ನ ವಿಭಿನ್ನವಾಗಿ ಹೇಳಿದ ಫುಟ್ಬಾಲ್ ತಾರೆ
ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಗೆಲುವಿನ ಗೋಲು ಗಳಿಸುವ ಜೊತೆಗೆ ಬದುಕಿನಲ್ಲೂ ಬಂದಿರುವ ಸಿಹಿಸುದ್ದಿಯನ್ನು ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ತಾನು ತಂದೆಯಾಗುತ್ತಿದ್ದೇನೆ ಎಂಬ ವಿಚಾರವನ್ನು ಸುನಿಲ್ ಚೆಟ್ರಿ ವಿಭಿನ್ನವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಭಾರತ ಫುಟ್ಬಾಲ್ ತಂಡ ಇಂಟರ್ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ವನುವಾಟು ದೇಶವನ್ನು 1-0 ಗೋಲುಗಳಿಂದ ಸೋಲಿಸಿದೆ. ಸ್ಟಾರ್ ಸ್ಟ್ರೈಕರ್ ಚೆಟ್ರಿ ಪಂದ್ಯದ 81ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿ ಭಾರತದ ಗೆಲುವಿಗೆ ಕಾರಣರಾದರು. ನಂತರ ಅವರು ತಾನು ತಂದೆಯಾಗುತ್ತಿರುವ ವಿಚಾರವನ್ನು ತಿಳಿಸಿದ ಪರಿಯಂತೂ ವಿಶೇಷವಾಗಿತ್ತು. ತಮ್ಮ ಜೆರ್ಸಿಯೊಳಗೆ ಹೊಟ್ಟೆಯ ಭಾಗದಲ್ಲಿ ಚೆಂಡನ್ನು ಇಟ್ಟುಕೊಳ್ಳುವ ಮೂಲಕ ತಾನು ತಂದೆಯಾಗುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡರು.
ಇದನ್ನೂ ಓದಿ:ಪುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರನಿಗೆ ಬಿಗ್ ಶಾಕ್ – ಚೀನಾದಲ್ಲಿ ಲಿಯೋನೆಲ್ ಮೆಸ್ಸಿ ಬಂಧನ!
ಇದಾದ ಬಳಿಕ ಕ್ರೀಡಾಂಗಣದಲ್ಲಿದ್ದ ಪತ್ನಿ ಸೋನಂ ಭಟ್ಟಾಚಾರ್ಯ ಅವರನ್ನು ನೋಡಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದರು. ಸೋನಂಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದು, ಪತ್ನಿ ಕೂಡ ಎದ್ದು ನಿಂತು ಪತಿಗೆ ಪ್ರೀತಿಯ ಸಂಕೇತ ತೋರಿಸಿದ್ದಾರೆ. ಸೋನಂ ಬೇಬಿ ಬಂಪ್ನೊಂದಿಗೆ ಕಾಣಿಸಿಕೊಂಡಿದ್ದಾರೆ. ಪಂದ್ಯದ ನಂತರ ಸುನಿಲ್ ಚೆಟ್ರಿ ಮಾತನಾಡಿದ್ದು, ನನ್ನ ಹೆಂಡತಿ ಮತ್ತು ನಾನು ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಭವಿಷ್ಯದ ಮಗುವನ್ನು ಈ ರೀತಿ ಘೋಷಿಸಬೇಕೆಂದು ಅವಳು ಬಯಸಿದ್ದಳು. ಎಲ್ಲರೂ ಆಶೀರ್ವಾದ ಮತ್ತು ಶುಭ ಹಾರೈಸುತೀರಾ ಎಂದು ಭಾವಿಸುತ್ತೇವೆ ಎಂದಿದ್ದಾರೆ.