ಉಚಿತ ಬಸ್ ಪ್ರಯಾಣ – ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ
ಮಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯೋಜನೆಗೆ ಚಾಲನೆ (ಜೂ.11) ಸಿಕ್ಕಿದ ದಿನವೇ 5,71,023 ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದುಕೊಂಡಿದ್ದರು. ಇದೀಗ ಫ್ರೀ.. ಫ್ರೀ.. ಅಂತಾ ಮಹಿಳೆಯರು ರಾಜ್ಯ ಸುತ್ತಲು ಶುರು ಮಾಡಿದ್ದಾರೆ. ಹೀಗಾಗಿಯೇ ಕರಾವಳಿ ಭಾಗದ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಿದೆ.
ಇದನ್ನೂ ಓದಿ: ಫ್ರೀ ಬಸ್ ಟಿಕೆಟ್ ಎಫೆಕ್ಟ್ – ಓಲಾ, ಉಬರ್ ಬುಕ್ಕಿಂಗ್ನಲ್ಲಿ ಶೇ.30 ರಷ್ಟು ಇಳಿಕೆ!
ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವ ಹಿನ್ನೆಲೆ ಕರಾವಳಿ ಭಾಗದ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಪಡೆಯುತ್ತಿದ್ದಾರೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಕಳೆದ ವಾರಾಂತ್ಯವೂ ದೇವಾಲಯಗಳಲ್ಲಿ ಭಾರಿ ಜನ ದಟ್ಟಣೆಇತ್ತು. ಆದರೆ ಉಚಿತ ಬಸ್ ಪ್ರಯಾಣ ಆರಂಭವಾದ ಹಿನ್ನೆಲೆ ವಾರದ ನಡುವೆಯೂ ಕೂಡ ಭಕ್ತರ ದಟ್ಟಣೆ ಹೆಚ್ಚಿದೆ. ಬೆಂಗಳೂರು, ಕೋಲಾರ, ಚಿತ್ರದುರ್ಗ, ತುಮಕೂರು, ಉತ್ತರ ಕರ್ನಾಟಕ ಭಾಗದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಕರಾವಳಿಯ ಪುಣ್ಯ ಕ್ಷೇತ್ರಗಳಿಗೆ ಆಗಮಿಸುತ್ತಿದ್ದಾರೆ.
ರಾಜ್ಯದ ಎಲ್ಲ ಮಹಿಳೆಯರು ಶಕ್ತಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದು, ಪ್ರತಿನಿತ್ಯ 41.81 ಲಕ್ಷ ಮಹಿಳೆಯರು (11.58 ಲಕ್ಷ ಪಾಸ್ ಪ್ರಯಾಣಿಕರು ಸೇರಿ) ಲಾಭ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ರಾಜ್ಯದ 6,308 ನಗರ, 5,958 ಸಾಮಾನ್ಯ ಹಾಗೂ 6,443 ವೇಗದೂತ ಸೇರಿದಂತೆ ಒಟ್ಟು 18,609 ಬಸ್ಗಳಲ್ಲಿ ಪ್ರಯಾಣಿಸಬಹುದು.