ಸಂಗಾತಿ ಇಲ್ಲದೆಯೇ ಗರ್ಭವತಿಯಾದ ಮೊಸಳೆ – ಸ್ವಯಂ ಸಂತಾನೋತ್ಪತ್ತಿ ಎಂದ ತಜ್ಞರು!

ಸಂಗಾತಿ ಇಲ್ಲದೆಯೇ ಗರ್ಭವತಿಯಾದ ಮೊಸಳೆ – ಸ್ವಯಂ ಸಂತಾನೋತ್ಪತ್ತಿ ಎಂದ ತಜ್ಞರು!

ಪ್ರಕೃತಿಯಲ್ಲಿ ನಡೆಯುವ ಕೆಲ ಘಟನೆಗಳು ಅಚ್ಚರಿಯ ಜೊತೆಗೆ ಪ್ರಶ್ನೆಗಳನ್ನೂ ಮೂಡಿಸುತ್ತವೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದು ಈ ಘಟನೆ. ಜಗತ್ತಿನಲ್ಲಿ ಈಗ ಏನೇನೋ ತಂತ್ರಜ್ಞಾನದ ಮೂಲಕ ಜೀವ ನೀಡಲಾಗುತ್ತದೆ. ಆದರೆ ಯಾವುದೇ ಸೃಷ್ಟಿಕ್ರಿಯೆಗೆ ಗಂಡು ಹೆಣ್ಣು ಎರಡೂ ಜೀವಗಳು ಬೇಕು, ಮನುಷ್ಯರಾದರೂ ಅಷ್ಟೇ ಪ್ರಾಣಿಗಳಾದರೂ ಅಷ್ಟೇ. ಆದರೆ ಕೊಸ್ಟಾರಿಕಾದ ಮೊಸಳೆಯೊಂದು ಗಂಡು ಸಂಗಾತಿ ಇಲ್ಲದೇ ಗರ್ಭವತಿಯಾಗಿದೆಯಂತೆ. ಇದು ಭಾರೀ ಸಂಚಲನ ಸೃಷ್ಟಿಸಿದೆ.

ಸಂಗಾತಿ ಇಲ್ಲದೆ ಮೊಸಳೆ ಗರ್ಭಿಣಿ ಆಗಿದ್ದು, ಇದು ಮೊದಲ ಪ್ರಕರಣ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದು ಡೈನೋಸಾರ್‌ ಜಾತಿಯ ಪ್ರಾಣಿಗಳು ಸ್ವಯಂ ಸಂತಾನೋತ್ಪತಿ ಮಾಡಬಹುದು ಎಂಬ ಸಿದ್ಧಾಂತವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 18 ವರ್ಷದ ಈ ಹೆಣ್ಣು ಮೊಸಳೆ 16 ವರ್ಷಗಳ ಕಾಲ ಸಂಗಾತಿ ಇಲ್ಲದೇ ಒಂಟಿಯಾಗಿ ಸರಿಸೃಪಗಳಿಗೆ ಇರುವ ಪಾರ್ಕೊಂದರಲ್ಲಿ ಕಾಲ ಕಳೆದಿತ್ತು. ಆದರೆ ಅಚ್ಚರಿ ಎಂಬಂತೆ 2018ರಲ್ಲಿ ಪಾರ್ಕ್‌ನಲ್ಲಿ ಇದರ ಮೊಟ್ಟೆಯೊಂದು ಪತ್ತೆಯಾಗಿತ್ತು. ವರ್ಜಿನ್ ಬರ್ತ್ಸ್ ಎಂದು ಕರೆಯಲಾಗುವ ಈ ವಿದ್ಯಮಾನಕ್ಕೆ ವೈಜ್ಞಾನಿಕವಾಗಿ ‘ಫ್ಯಾಕಲ್ಟೇಟಿವ್ ಪಾರ್ಥೆನೋಜೆನೆಸಿಸ್’ (facultative parthenogenesis) ಎಂದು ಕೂಡ ಕರೆಯಲಾಗುತ್ತದೆ. ಇದರ ಪ್ರಕಾರ ಕೆಲವು ಪಕ್ಷಿಗಳು ಹಾಗೂ ಸರಿಸೃಪಗಳು ಗಂಡಿನ ಸಂಪರ್ಕವಿಲ್ಲದೇ ಸಂತಾನೋತ್ಪತಿ ನಡೆಸುತ್ತವೆಯಂತೆ.

ಇದನ್ನೂ ಓದಿ : 102 ಮಕ್ಕಳಾದ ಮೇಲೆ ಗರ್ಭನಿರೋಧಕ ಮಾತ್ರೆಯ ನೆನಪಾಯ್ತು – ಪಾಪ.. 12 ಪತ್ನಿಯರ ಪಾಡು..!

ಇದರ ಪ್ರಕಾರ, ಹೆಣ್ಣು ಮೊಟ್ಟೆಯ ಕೋಶವು ಫಲವತ್ತಾಗದೆ ಭ್ರೂಣವಾಗಿ ಬೆಳೆದಾಗ ಈ ರೀತಿಯ ಪ್ರಕ್ರಿಯೆ ಸಂಭವಿಸುತ್ತದೆ. ಮೊಟ್ಟೆಯೂ ರೂಪುಗೊಂಡು ಜೊತೆಗೆ ಉಳಿದಿರುವ ಆನುವಂಶಿಕ ವಸ್ತುಗಳೊಂದಿಗೆ ಬೆಸೆಯುವಿಕೆಯಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ವರ್ಜೀನಿಯಾದ ಪಾಲಿಟೆಕ್ನಿಕ್‌ನ ಸಂಶೋಧಕರ ವಿಶ್ಲೇಷಣೆಯ ಪ್ರಕಾರ ಭ್ರೂಣವು 99.9% ಕ್ಕಿಂತ ಹೆಚ್ಚು ತಳೀಯವಾಗಿ ತಾಯಿಯನ್ನು ಹೋಲುತ್ತದೆ ಆದರೆ ಇಬ್ಬರು ಪೋಷಕರಿದ್ದ ಸಂದರ್ಭದಲ್ಲಿ ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ರಾಯಲ್ ಸೊಸೈಟಿ ಜರ್ನಲ್ ಬಯಾಲಜಿ ಲೆಟರ್ಸ್‌ನಲ್ಲಿ (Royal Society journal Biology Letters) ಸಂಶೋಧಕರ ತಂಡ ಬರೆದಿರುವಂತೆ, ಬಂಧನದಲ್ಲಿರುವ ಸರೀಸೃಪಗಳು ಗಂಡಿಲ್ಲದೇ ಮೊಟ್ಟೆಗಳನ್ನು ಇಡುವುದು ಅಸಾಮಾನ್ಯವೇನಲ್ಲ, ಅವುಗಳಿಗೆ ಧೀರ್ಘಕಾಲ ಸಂಗಾತಿಯ ಸಂಪರ್ಕವನ್ನೇ ನೀಡದಿದ್ದರೆ ಇವುಗಳು ಸಾಮಾನ್ಯವಾಗಿ ಗಂಡನ್ನು ತಿರಸ್ಕರಿಸುತ್ತವೆಯಂತೆ. ಆದ್ದರಿಂದ ಗಂಡಿನ ಸಂಪರ್ಕವಿಲ್ಲದೇ ಸೃಷ್ಟಿಯಾದ ಮೊಟ್ಟೆಗಳನ್ನು ಸಂಭಾವ್ಯ ಕಾರ್ಯಸಾಧ್ಯತೆಗಾಗಿ ಮೌಲ್ಯಮಾಪನ ಮಾಡಬೇಕು ಎಂದು ಈ ಸಂಶೋಧನೆಗಳು ಸೂಚಿಸಿವೆ. ಅಲ್ಲದೇ ಗಮನಕ್ಕೆ ಬಾರದೇ ಹೋದ ಇಂತಹ ಇನ್ನೂ ಹಲವು ಪ್ರಕರಣಗಳು ಸಂಭವಿಸಿರಬಹುದು ಎಂದು ಈ ಸಂಶೋಧರಕರ ತಂಡ ಹೇಳಿದೆ. ಸಂಭಾವ್ಯ ಸಂಗಾತಿಗಳ ಉಪಸ್ಥಿತಿ ಇದ್ದಾಗಲೂ ಈ ರೀತಿಯ ಪ್ರಕ್ರಿಯೆ ನಡೆಯಬಹುದು. ಆದರೆ ಗಂಡು ಸಂಗಾತಿಯೊಂದಿಗೆ ವಾಸಿಸುವ ಹೆಣ್ಣುಗಳಲ್ಲಿ ಸಂತಾನೋತ್ಪತ್ತಿ ಸಂಭವಿಸಿದಾಗ ಇದರ ಈ ರೀತಿಯ ಪ್ರಮಾಣ ಕಡಿಮೆ ಇರಬಹುದು ಎನ್ನಲಾಗಿದೆ.

suddiyaana