ಕರಾವಳಿಯಲ್ಲಿ 31 ವರ್ಷಗಳ ನಂತರ ಜಲಕ್ಷಾಮ..! – ಕಟೀಲು ಕ್ಷೇತ್ರದಲ್ಲೂ ನೀರಿಗೆ ಬರ..!

ಕರಾವಳಿಯಲ್ಲಿ 31 ವರ್ಷಗಳ ನಂತರ ಜಲಕ್ಷಾಮ..! – ಕಟೀಲು ಕ್ಷೇತ್ರದಲ್ಲೂ ನೀರಿಗೆ ಬರ..!

ಕರಾವಳಿಗೂ ಇಂಥದ್ದೊಂದು ದಿನ ಬರುತ್ತೆ ಅಂತಾ ಯಾರೂ ಊಹಿಸಿರಲಿಲ್ಲ. ಜಲಕ್ಷಾಮ ಎಂಬ ಪದವನ್ನ ಕರಾವಳಿ ಜನತೆ ಕೇಳಿಸಿಕೊಂಡಿದ್ದು ಬಿಟ್ರೆ ಯಾವತ್ತೂ ಅನುಭವಿಸಿರಲಿಲ್ಲ. ಆದ್ರೀಗ ಕರಾವಳಿಗರಿಗೂ ಬರಗಾಲದ ಬಿಸಿ ಮುಟ್ಟಿದೆ. ಯಾಕಂದರೆ ಜೂನ್ ಬಂದ್ರೂ ಕರಾವಳಿಯಲ್ಲಿ, ಅದ್ರಲ್ಲೂ ವಿಶೇಷವಾಗಿ ಮಂಗಳೂರು ಭಾಗದಲ್ಲಿ ಮಳೆಯ ಹನಿಯೂ ಬಿದ್ದಿಲ್ಲ. ಏಪ್ರಿಲ್, ಮೇ ತಿಂಗಳಿನಂತೆ ಇನ್ನೂ ಕೂಡ ಭೂಮಿ ಬಣ ಬಣ ಅಂತಿದೆ. ಬಿರು ಬಿಸಿಲಿಗೆ ದಕ್ಷಿಣ ಕನ್ನಡ ಒಣಗಿ ಹೋಗುತ್ತಿದೆ. ಮನೆಯಿಂದ ಹೊರ ಕಾಲಿಟ್ರೆ ಸಾಕು ಮೈಸುಡುವ ಬಿಸಿಲಿನಿಂದ ಬೆವರಲ್ಲೇ ಸ್ನಾನವಾಗುತ್ತಿದೆ. 31 ವರ್ಷಗಳ ನಂತರ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಲಕ್ಷಾಮ ಎದುರಾಗಿದೆ.

ಇದನ್ನೂ ಓದಿ: ಮುಂಗಾರು ವಿಳಂಬ.. ನೀರಿಗೆ ಬರ – ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಇನ್ನೊಂದೆಡೆ, ಕಟೀಲು ದೇವಸ್ಥಾನದ ಪಕ್ಕದಲ್ಲಿ ಹರಿಯುವ ನಂದಿನಿ ನದಿ ಬತ್ತಿ ಹೋಗಿದೆ. ಹೀಗಾಗಿ ದೇವಿಯ ಮೊರೆ ಹೋಗಲಾಗಿದೆ. ಇನ್ನೊಂದೆಡೆ, ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತಗೊಂಡಿದೆ. ಹೀಗಾಗಿ ಜಿಲ್ಲಾಡಳಿತವು ಎಎಂಆರ್ ಡ್ಯಾಂನಿಂದ ನೀರು ಬಿಟ್ಟಿದೆ. ಇನ್ನು ಕಟೀಲು ದೇವಸ್ಥಾನಕ್ಕೆ ಬರುವ ಭಕ್ತರಿಗೂ ನೀರಿನ ಬರ ತಟ್ಟಬಾರದು ಅನ್ನೋ ನಿಟ್ಟಿನಲ್ಲಿ ದೇವಸ್ಥಾನ ಮಂಡಳಿ ಅನೇಕ ಕ್ರಮ ಕೈಗೊಂಡಿದೆ. ಊಟಕ್ಕೆ ಸದ್ಯ ಹಾಳೆಯ ತಟ್ಟೆಯನ್ನ ಬಳಕೆ ಮಾಡಲಾಗುತ್ತಿದೆ. ಕ್ಷೇತ್ರದ ಶಾಲಾ-ಕಾಲೇಜುಗಳಿಗೆ ನೀಡುತ್ತಿದ್ದ ಬಿಸಿಯೂಟ ನಿಲ್ಲಿಸಲಾಗಿದೆ. ಕಟೀಲು ಕ್ಷೇತ್ರಕ್ಕೆ ಸಂಬಂಧಿಸಿದ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಅರ್ಧ ದಿನ ಶಾಲೆ ನಡೆಸಲಾಗುತ್ತಿದೆ. ಕ್ಷೇತ್ರದ ಗೋವುಗಳಿಗೂ ನೀರಿನ ಬರ ಎದುರಾಗಿದೆ.

ಮತ್ತೊಂದೆಡೆ ಮಂಗಳೂರಿನಲ್ಲಿ ನೀರಿಲ್ಲದೇ, ಹೋಟೆಲ್ ಉದ್ಯಮ ಕಂಗೆಟ್ಟಿದೆ. ಹೊಟೇಲ್ ಮಾಲೀಕರು ಸ್ವಂತ ನೀರು ಅಥವಾ ಪ್ರೈವೇಟ್ ಟ್ಯಾಂಕ್ ಮೂಲಕ ನೀರನ್ನು ತಂದು ಉದ್ಯಮ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ನೀರಿನ ಟ್ಯಾಂಕರ್ ದರ ಕೂಡ ಗಗನಕ್ಕೆರುತ್ತಿದೆ. ಇನ್ನು ಒಂದು ವಾರ ಮಳೆ ಬರದಿದ್ದರೆ ಹೋಟೆಲ್ ಬಂದ್ ಮಾಡುವ ಸ್ಥಿತಿಯೂ ಇದೆ. ಜೀವ ನದಿ ನೇತ್ರಾವತಿ ತಿಂಗಳ ಹಿಂದೆಯೆ ತನ್ನ ಹರಿವು ನಿಲ್ಲಿಸಿದ್ದು, ಇನ್ನು ಮಳೆ ಬಾರದಿದ್ದರೆ ಮಂಗಳೂರು ನಗರದಲ್ಲಿ ನೀರಿಗಾಗಿ ಸಂಕಷ್ಟ ಹೆಚ್ಚಾಗಲಿದೆ. ನಗರದಲ್ಲಿ ಮಾತ್ರವಲ್ಲದೆ, ಗ್ರಾಮಾಂತರದಲ್ಲೂ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು, ನೇತ್ರಾವತಿ ನದಿ ಬತ್ತಿದ್ದರಿಂದ ಅಂತರ್ಜಲ ಮಟ್ಟ ಕುಸಿತಗೊಂಡಿದೆ. ಹೀಗಾಗಿ ಶೀಘ್ರ ಮಳೆಯಾಗುವಂತೆ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

suddiyaana