ಬಸ್ ನಲ್ಲೇ ನಗರಾಭಿವೃದ್ಧಿ ಸಚಿವರ ಸಿಟಿ ರೌಂಡ್ಸ್ -ಮಳೆಹಾನಿ ತಡೆಗೆ ಸೂಚನೆ, ರಾಜಕಾಲುವೆ ಒತ್ತುವರಿ ತೆರವಿಗೆ ವಾರ್ನಿಂಗ್!
ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಇವತ್ತು ಸಿಟಿ ರೌಂಡ್ಸ್ ಹಾಕಿದ್ದು ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಅಧಿಕಾರಿಗಳ ಜೊತೆ ಮಳೆಹಾನಿ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಇದೇ ವೇಳೆ, ಶಿವರಾಮ ಕಾರಂತ ಬಡವಾಣೆ ಸಂಬಂಧ, ಅಧಿಕಾರಿಗಳ ಜೊತೆ ಸಭೆ ನಡೆಸಿ, ರೈತರಿಗೂ ಸರ್ಕಾರಕ್ಕೂ ಅನುಕೂಲ ಆಗುವ ಹಾಗೆ ಕ್ರಮ ಕೈಗೊಳ್ಳಲಾಗುವುದು, ಕಾರಂತ ಬಡಾವಣೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ 11 ಗಂಟೆಗೆ ಬಿಡಿಎಯಿಂದ ಸಿಟಿ ಪ್ರದಕ್ಷಿಣೆ ಹೊರಟ ಡಿಸಿಎಂ ಡಿ.ಕೆ ಶಿವಕುಮಾರ್, ಅಧಿಕಾರಿಗಳ ಜೊತೆಗೆ ಬಸ್ ನಲ್ಲೇ ಪ್ರದಕ್ಷಿಣೆ ಹಾಕಿದ್ದಾರೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಹಾನಿ ಆಗುವ ಸಾಧ್ಯತೆ ಇದೆಯೋ ಅಲ್ಲಿ ಪರಿಶೀಲನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಸಂಬಂಧ ಸಭೆ ನಡೆಸಲಾಗಿದೆ. ನಮಗೆ ಜಾಗ ನೀಡಿದ ರೈತರಿಗೆ ಅನುಕೂಲ ಆಗಬೇಕಿದೆ. ಕಾನೂನು ಅಡಿ ಏನು ಸಾಧ್ಯವೋ ಅದನ್ನು ಮಾಡುತ್ತೇವೆ. ಇದ್ರಿಂದ ರೈತರಿಗೂ ಒಳಿತಾಗಬೇಕು ಹಾಗೂ ಸರ್ಕಾರಕ್ಕೂ ಒಳಿತಾಗಾಗಬೇಕು ಎಂದರು.
ಇದನ್ನೂ ಓದಿ : ಬಿಡಿಎ ಅಧ್ಯಕ್ಷರನ್ನಾಗಿ IAS ಅಧಿಕಾರಿಯನ್ನ ನೇಮಿಸಿದ ರಾಜ್ಯ ಸರ್ಕಾರ – ಹುದ್ದೆ ಮೇಲೆ ಕಣ್ಣಿಟ್ಟಿದ್ದ ಶಾಸಕರಿಗೆ ಶಾಕ್!
ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಸಂಬಂಧ ಬಿಡಿಎ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದ್ರು. ಸಭೆಯಲ್ಲಿ ಬಡಾವಣೆ ನಿರ್ಮಾಣ ಸಂಬಂಧ ವಿಚಾರಣೆ ಸಮಿತಿ ಮುಖ್ಯಸ್ಥರಾದ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್, ಸದಸ್ಯರಾದ ನಿವೃತ್ತ ಬಿಡಿಎ ಕಮಿಷನರ್ ಜೈಕರ್ ಜೈರೋಮ್, ನಿವೃತ್ತ ಡಿಜಿಪಿ ಎಸ್ ಟಿ ರಮೇಶ್, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಕಮಿಷನರ್ ಕುಮಾರ ನಾಯಕ್ ಭಾಗವಹಿಸಿದ್ದರು.
ಇನ್ನು ಮಳೆಗಾಲದ ವೇಳೆ ಬೆಂಗಳೂರು ನಗರದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇದಕ್ಕೆ ಕಾರಣ ರಾಜಾಕಾಲುವೆಗಳ ಒತ್ತುವರಿ ಕಾರಣ ಎಂಬುದು ಭೇಟಿಯ ವೇಳೆ ಸಾರ್ವಜನಿಕರು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಕೆ. ಶಿವಕುಮಾರ್ ದಿವ್ರಶ್ರೀ ಕಾಲುವೆ ಒತ್ತುವರಿಯಾಗಿರುವ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 12 ಮೀ. ಉದ್ದದ ರಾಜಾಕಾಲುವೆ ಜಾಗದಲ್ಲಿ 7 ಮೀ.ಒತ್ತುವರಿ ಮಾಡಿಕೊಳ್ಳಲಾಗಿದೆ. ಅದು ಹೀಗೆ ಮುಂದುವರೆದರೆ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ತಕ್ಷಣ ಒತ್ತುವರಿ ಜಾಗವನ್ನು ತೆರವುಗೊಳಿಸಿ ರಾಜಾಕಾಲುವೆ ತ್ವರಿತವಾಗಿ ನಿರ್ಮಿಸಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಸ್ಥಳದಲ್ಲೇ ಆದೇಶ ನೀಡಿದರು.
ಇದಕ್ಕೂ ಮುನ್ನ ಯಮಲೂರು ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ ವ್ಯವಸ್ಥೆಯನ್ನು ವೀಕ್ಷಿಸಿ ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಬೆಳ್ಳಂದೂರು ಕೆರೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳ್ಳಂದೂರು ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ತಕ್ಷಣ ಅದನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ, ಬಿಡಿಎ ನೂತನ ಅಧ್ಯಕ್ಷ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಎಂಆರ್ ಸಿಎಲ್ ಎಂಡಿ ಅಜುಂ ಪರ್ವೇಜ್ಸೇರಿದಂತೆ ವಿಶೇಷ ಆಯುಕ್ತರು ಹಾಗೂ ವಲಯ ಅಧಿಕಾರಿಗಳು ಸೇರಿದಂತೆ ಪ್ರಮುಖರಿದ್ದರು.