ಗುಂಡ್ಲುಪೇಟೆಯಲ್ಲೂ ಇದೆ ‘ಅಕ್ಕಿ ಕಳ್ಳ’ ಆನೆ – ಒಂಟಿ ಮನೆಗಳೇ ಪುಂಡಾನೆಯ ಟಾರ್ಗೆಟ್..!
ಬಂಡೀಪುರ ಅರಣ್ಯದಂಚಿನಲ್ಲಿ ಪುಂಡಾನೆಯೊಂದು ಅಲ್ಲಿನ ಜನರಿಗೆ ನೀಡುತ್ತಿರುವ ಕಾಟ ಒಂದೆರಡಲ್ಲ. ಪುಂಡಾನೆಯ ಟಾರ್ಗೆಟ್ ಏನು ಗೊತ್ತಾ.. ಒಂಟಿ ಮನೆಗಳು. ಪುಂಡಾನೆ ಅರಣ್ಯದಂಚಿನಲ್ಲಿಯೇ ಇದ್ದು ಒಂಟಿ ಮನೆಗಳನ್ನು ಗುರುತು ಮಾಡಿಕೊಂಡಿರುತ್ತದೆ. ನಂತರ ಒಂಟಿ ಮನೆಗಳಿಗೆ ಸೀದಾ ನುಗ್ಗುತ್ತದೆ. ನುಗ್ಗಿದ್ದೇ ತಡ, ಮೊದಲು ಹುಡುಕುವುದೇ ಅಕ್ಕಿ ಮತ್ತು ಬೆಲ್ಲವನ್ನು. ಅಕ್ಕಿ ಬೆಲ್ಲದ ರುಚಿ ಕಂಡ ಆನೆ ಈಗ ಅನೇಕ ಒಂಟಿ ಮನೆಗಳ ಮೇಲೆ ದಾಳಿ ಮಾಡಿದೆ. ಮನೆಯಲ್ಲಿರುವ ಅಕ್ಕಿ, ಬೆಲ್ಲ, ತರಕಾರಿಯನ್ನು ತಿಂದು ತೇಗುತ್ತಿದೆ.
ಇದನ್ನೂ ಓದಿ: ಅಕ್ಕಿ ಆಸೆಗೆ ಜನಗಳ ಜೀವ ತೆಗೆಯುತ್ತಿದ್ದ ಕಳ್ಳಾನೆ ಸೆರೆ – ತಯಾರಾಗುತ್ತಿದೆ ‘ಅರಿಕೊಂಬನ್’ ಅಟ್ಟಹಾಸದ ಸಿನಿಮಾ
ಗುಂಡ್ಲುಪೇಟೆ ತಾಲೂಕು ಹುಂಡೀಪುರ, ಮಂಗಲ, ಜಕ್ಕಳ್ಳಿ, ಎಲಚೆಟ್ಟಿ ಸೇರಿದಂತೆ ಹಲವೆಡೆ ಕಾಡಾನೆಯ ಉಪಟಳ ಹೆಚ್ಚಾಗಿದೆ. ಕಳೆದ 5 ತಿಂಗಳಿಂದ ನಿರಂತರವಾಗಿ ಉಪಟಳ ನೀಡುತ್ತಿರುವ ಒಂಟಿ ಆನೆಯನ್ನು ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. 5 ಸಾಕಾನೆಗಳಿಂದ ಪುಂಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ದುಬಾರೆ, ರಾಮಾಪುರ ಬಿಳಿಗಿರಿರಂಗನ ಬೆಟ್ಟದಿಂದ ಸಾಕಾನೆಗಳನ್ನು ಕರೆತರಲಾಗಿದೆ. ಈಗಾಗಲೇ ಡ್ರೋನ್ ಕಾರ್ಯಾಚರಣೆ ಮೂಲಕ ಪುಂಡಾನೆಯನ್ನು ಪತ್ತೆಹಚ್ಚಲಾಗಿದೆ. ಎಲಚೆಟ್ಟಿ ಬಳಿ ಒಂಟಿ ಸಲಗದ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಅರಣ್ಯ ಸಿಬ್ಬಂದಿ ಪುಂಡಾನೆ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಅಕ್ಕಿ, ಬೆಲ್ಲ, ತರಕಾರಿ ಕದ್ದು ತಿನ್ನುವ ಪುಂಡಾನೆಗೆ ತಕ್ಕ ಪಾಠ ಕಲಿಸಲು ಸಾಕಾನೆಗಳು ಸನ್ನದ್ಧವಾಗಿವೆ.