ಅಕ್ಕಿ ಆಸೆಗೆ ಜನಗಳ ಜೀವ ತೆಗೆಯುತ್ತಿದ್ದ ಕಳ್ಳಾನೆ ಸೆರೆ – ತಯಾರಾಗುತ್ತಿದೆ ‘ಅರಿಕೊಂಬನ್’ ಅಟ್ಟಹಾಸದ ಸಿನಿಮಾ

ಅಕ್ಕಿ ಆಸೆಗೆ ಜನಗಳ ಜೀವ ತೆಗೆಯುತ್ತಿದ್ದ ಕಳ್ಳಾನೆ ಸೆರೆ – ತಯಾರಾಗುತ್ತಿದೆ ‘ಅರಿಕೊಂಬನ್’ ಅಟ್ಟಹಾಸದ ಸಿನಿಮಾ

ಮನೆಗಳಿಗೇ ನುಗ್ಗುತ್ತಿದ್ದ. ಜನರೆದುರೇ ಕಳ್ಳತನ ಮಾಡುತ್ತಿದ್ದ. ಯಾರಾದ್ರೂ ತಡೆಯಲು ಬಂದರೆ ಅವರ ಕಥೆ ಮುಗಿಯಿತು ಅಂತಾನೇ ಅರ್ಥ. ಹೀಗೆ 10ಕ್ಕೂ ಹೆಚ್ಚು ಜನರನ್ನ ಕೊಂದು ಹಾಕಿದ್ದ ಅವನಿಗೆ ಅಭಿಮಾನಿಗಳ ಸಂಘವೂ ಇದೆ. ಊರುಗಳಲ್ಲಿ ಫ್ಲೆಕ್ಸ್, ಬ್ಯಾನರ್ಸ್ ರಾರಾಜಿಸುತ್ತಿವೆ. ಅವನ ಬಗ್ಗೆ ಸಿನಿಮಾ ಕೂಡ ಆಗುತ್ತಿದೆ. ಅವನನ್ನ ಎಷ್ಟು ಜನ ಪ್ರೀತಿಸುತ್ತಾರೋ ಅದಕ್ಕಿಂತ ಹೆಚ್ಚು ಜನ ದ್ವೇಷಿಸುತ್ತಾರೆ. ಕೊನೆಗೆ ಅವನ ಬಂಧನ ವಿಚಾರ ಕೋರ್ಟ್ ಮೆಟ್ಟಿಲು ಏರಿ ಅರೆಸ್ಟ್ ಕೂಡ ಮಾಡಲಾಗಿದೆ. ಹಾಗಾದ್ರೆ ಯಾರು ಅವನು..? ಜನ ಯಾಕೆ ಅಷ್ಟೊಂದು ಭಯ ಪಡ್ತಾರೆ..? ಇಷ್ಟು ದಿನ ಯಾಕೆ ಅರೆಸ್ಟ್ ಮಾಡಿರಲಿಲ್ಲ..? ಈ ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

ಅರಿಕೊಂಬನ್. ಬಹುತೇಕ ಜನರಿಗೆ ಅರಿಕೊಂಬನ್ ಅನ್ನೋದಕ್ಕಿಂತ ಅಕ್ಕಿಕಳ್ಳ ಅಂದ್ರೆ ಬೇಗ ಅರ್ಥವಾಗುತ್ತೆ. ಹೌದು ಕೇರಳ ಹಾಗೂ ತಮಿಳುನಾಡಿನಲ್ಲಿ ಅಕ್ಕಿಕಳ್ಳ ಎಂದೇ ಹೆಸರುವಾಸಿಯಾಗಿರುವ ಆನೆಯ ರೋಚಕ ಕಥೆ ಇದು. ಕಳೆದ ಕೆಲ ವರ್ಷಗಳಿಂದ ಜನವಸತಿ ಪ್ರದೇಶಗಳಲ್ಲಿ ಆತಂಕ ಮೂಡಿಸಿದ್ದ ಒಂಟಿ ಆನೆ ಅರಿಕೊಂಬನ್‌ನನ್ನು ತಮಿಳುನಾಡು ಅರಣ್ಯ ಇಲಾಖೆ ಬಂಧಿಸಿದೆ. ಥೇಣಿ ಜಿಲ್ಲೆಯ ಪೂಷಣಂ ಎಂಬಲ್ಲಿ ಮಾದಕ ವಸ್ತು ಸಹಿತ ಮದ್ದು ಗುಂಡು ಹಾರಿಸಿ ಆನೆಯನ್ನು ಸೆರೆ ಹಿಡಿಲಾಗಿದೆ. ಅರಿಕೊಂಬನ್‌ನ ಕಾಲುಗಳನ್ನು ಹಗ್ಗದಿಂದ ಕಟ್ಟಿ ಆಂಬ್ಯುಲೆನ್ಸ್‌ನಲ್ಲಿ ಕೊಂಡೊಯ್ದು ಮೇಘಮಲ ಸಮೀಪದ ವೆಳ್ಳಿಮಲ ಅರಣ್ಯಕ್ಕೆ ಬಿಡಲಾಗಿದೆ.

ಮೇ 27ರಂದು ಕಂಪಾತ್‌ನ ಜನವಸತಿ ಪ್ರದೇಶಕ್ಕೆ ಬಂದಿದ್ದ ಅರಿಕೊಂಬನ್‌ ಭತ್ತದ ಗದ್ದೆಗೆ ಇಳಿದು ಬೆಳೆ ಹಾಳು ಮಾಡಿದ್ದ. ಜನರು ಭಯಭೀತರಾದ ಹಿನ್ನೆಲೆ ಮರುದಿನ ಮದ್ದು ಗುಂಡು ಹಾರಿಸಲು ತಮಿಳುನಾಡು ಅರಣ್ಯ ಇಲಾಖೆ ನಿರ್ಧರಿಸಿತ್ತು. ಇದರ ಭಾಗವಾಗಿ ಕಂಬಂ ಪುರಸಭೆಯಲ್ಲೂ ನಿಷೇಧಾಜ್ಞೆ ಘೋಷಿಸಲಾಗಿತ್ತು. ಆದರೆ ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಆನೆ ಬಳಿಕ ಏಕಾಏಕಿ ಕಣ್ಮರೆಯಾದ ಹಿನ್ನೆಲೆ ಮಿಷನ್ ವಿಫಲಗೊಂಡಿತ್ತು. ಒಂದೂವರೆ ತಿಂಗಳ ಅವಧಿಯಲ್ಲಿ ಅರಿಕೊಂಬನ್ ಆನೆ ಸಿಕ್ಕಿಬಿದ್ದಿರುವುದು ಇದು ಎರಡನೇ ಬಾರಿ. ಏಪ್ರಿಲ್ 29 ರಂದು, ಇಡುಕ್ಕಿಯ ಚಿನ್ನಕನಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಬೆಚ್ಚಿಬೀಳಿಸಿದ್ದ ಅರಿಕೊಂಬನ್‌ಗೆ ಡ್ರಗ್ಸ್ ನೀಡಿ ನಿಯಂತ್ರಣಕ್ಕೆ ಪಡೆದು ನಂತರ ಲಾರಿಯಲ್ಲಿ ಪೆರಿಯಾರ್ ವನ್ಯಜೀವಿ ಅಭಯಾರಣ್ಯದ ಮೆದಕಾನಂಗೆ ತಂದು ಬಿಡಲಾಗಿತ್ತು. ಕಾಡಿನ ಮರೆಯಲ್ಲಿ ಅಡಗಿ ಕುಳಿತು ಭತ್ತದ ಕೃಷಿ ತಿಂದು ತೇಗುತ್ತಿದ್ದ ಅರಿಕೊಂಬನ್, ಕೆಲವೇ ದಿನಗಳಲ್ಲಿ ತಮಿಳುನಾಡು ಅರಣ್ಯದ ಗಡಿಭಾಗದ ಜನವಸತಿ ಮೇಘಮಲವನ್ನು ತಲುಪಿತ್ತು. ಆ ಬಳಿಕ ಕಂಪತ್ ವಸತಿ ಪ್ರದೇಶ ಪ್ರವೇಶಿಸಿತ್ತು.

ಅಷ್ಟಕ್ಕೂ ಈ ಆನೆಗೆ ಅಕ್ಕಿಕಳ್ಳ ಅನ್ನೋ ಹೆಸರು ಬಂದಿದ್ದೇ ಕುತೂಹಲಕಾರಿಯಾಗಿದೆ. 1987 ಸುಮಾರಿಗೆ ಕೇರಳದ ಇಡುಕ್ಕಿ ಜಿಲ್ಲೆಯ ದೇವಿಕುಳಂ ಅರಣ್ಯ ಪ್ರದೇಶದಲ್ಲಿ ಅಮ್ಮನ ಜೊತೆ ಜನವಸತಿ ಪ್ರದೇಶಕ್ಕೆ ಬಂದಿದ್ದ. ಇವನ ಅಮ್ಮನಿಗೆ ಕಾಲಿನಲ್ಲಿ ಗಾಯವಾಗಿತ್ತು. ಅಲ್ಲಿನ ನಿವಾಸಿಗಳು 3 ತಿಂಗಳ ಕಾಲ ಆರೈಕೆ ಮಾಡಿದ್ದರು. ಆದರೆ ತಾಯಿ ಆನೆ ಉಳಿಯಲೇ ಇಲ್ಲ. ಆಗ ಮರಿಯಾನೆಗೆ ಇನ್ನೂ ಒಂದೂವರೆ ವರ್ಷ ವಯಸ್ಸು. ಅಮ್ಮ ತೀರಿದ ಬಳಿಕ ಮರಿಯಾನೆ ಜನರ ಜೊತೆಯೇ ಬೆರೆತಿತ್ತು. ಇವನಿಗೆ ಜನರೆಲ್ಲಾ ತಿಂಡಿ ತಿಸಿಸುಗಳನ್ನ ನೀಡುತ್ತಿದ್ರು. ಅಸಲಿಗೆ ಅಕ್ಕಿಕಳ್ಳ ಅಂತಾ ಹೆಸರಿಟ್ಟಿದ್ದೂ ಇವರೇ. ಅದಕ್ಕೆ ಕಾರಣ ಇವನ ತರಲೆ.

ಜನರ ಜೊತೆ ಬೆರೆತಿದ್ದ ಇವನಿಗೆ ಅಕ್ಕಿ ಕಂಡರೆ ಎಲ್ಲಿಲ್ಲದ ಪ್ರೀತಿ. ತನ್ನ ಸೊಂಡಿಲು ಹಾಕಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ಹೀಗಾಗಿ ಇವನಿಗೆ ಕಳ್ಳಾನೆ ಎಂದು ಹೆಸರು ಬಂತು. ಈ ಆನೆಗೆ ಅಕ್ಕಿ ಮೇಲೆ ಎಂಥಾ ಹುಚ್ಚು ಅಂದರೆ ಅಕ್ಕಿ ಕದಿಯೋದನ್ನೇ ಚಾಳಿ ಮಾಡಿಕೊಂಡ. ಜನರನ್ನ ಪೀಡಿಸೋಕೆ ಶುರುಮಾಡಿದ. ಇಷ್ಟು ದಿನ ಯಾವ ಜನರ ಜೊತೆ ಬೆರೆತಿದ್ದನೋ ಅದೇ ಜನರ ಮೇಲೆ ತಿರುಗಿ ಬಿದ್ದಿದ್ದ. ನಂತರ ಇವನ ದಾಳಿಯಿಂದಾಗಿ 10ಕ್ಕೂ ಹೆಚ್ಚು ಜನ ಜೀವವನ್ನೇ ಕಳೆದುಕೊಂಡರು. 300ಕ್ಕೂ ಹೆಚ್ಚು ಮನೆಗಳು ಧ್ವಂಸವಾದವು. ಬಳಿಕ ಅಲ್ಲಿನ ಜನ ಪ್ರತಿಭಟನೆಗೆ ಮುಂದಾದರು. ಇಷ್ಟೆಲ್ಲಾ ಹೈಡ್ರಾಮಾಗಳ ಬಳಿಕ ಈ ಕಳ್ಳಾನೆ ವಿಚಾರ ಹೈಕೋರ್ಟ್ ಕೋರ್ಟ್ ಮೆಟ್ಟಿಲೇರಿತು.

ಸರ್ಕಾರ ಇವನ ಹುಡುಕಾಟಕ್ಕೆ ತಂಡ ನೇಮಕ ಮಾಡಿತ್ತು. ಪಾಲಕ್ಕಾಡ್ ಜಿಲ್ಲೆಯ ಪರಂಬಿಕುಳಂ ಹುಲಿ ಸಂರಕ್ಷಿತ ಅರಣ್ಯಕ್ಕೆ ಬಿಡುವುದಕ್ಕೆ ನಿರ್ಧರಿಸಿದ್ದರು. ಅಷ್ಟರಲ್ಲಾಗಲೇ ಇವನ ಕಳ್ಳಾಟ ಕಂಡಿದ್ದ ಪರಂಬಿಕುಳಂ ಜನ ಇವನನ್ನ ಬಿಡದಂತೆ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಇವನನ್ನ ಕೇರಳ ತಮಿಳುನಾಡು ಗಡಿಯಲ್ಲಿರುವ ತಮಿಳುನಾಡಿಗೆ ಸೇರಿದ ಪೆರಿಯಾರ್ ಹುಲಿ ಸಂರಕ್ಷಿತಾರಣ್ಯಕ್ಕೆ ಬಿಡುವುದಕ್ಕೆ ನಿರ್ಧರಿಸಲಾಯಿತು. ಹೈಕೋರ್ಟ್ ಇವನ ಸ್ಥಳಾಂತರಕ್ಕೂ ಒಪ್ಪಿಗೆ ನೀಡಿತ್ತು. ಕೊನೆಗೆ ಇವನು ಅಕ್ಕಿ ಕಳ್ಳ ಅನ್ನೋದು ಗೊತ್ತಿದ್ದೂ ಪೆರಿಯಾರ್ ಜನ ಅಕ್ಕಿ ಕೊಟ್ಟೇ ಇವನನ್ನ ಅಲ್ಲಿಗೆ ಸ್ವಾಗತಿಸಿದ್ದರು.

ಕಾಡಿನಲ್ಲಿ ಇದ್ದು ಅಭ್ಯಾಸ ಇಲ್ಲದ ಇವನು ಕೊನೆಗೆ ಜನರಿರುವ ಪ್ರದೇಶಕ್ಕೆ ನುಗ್ಗಿ ಒಬ್ಬನನ್ನ ಗಾಯಗೊಳಿಸಿದ. ಅಲ್ಲಿಂದಲೂ ಅವನನ್ನ ಬೇರೆಡೆ ಕಳಿಸುವಂತೆ ಕೂಗು ಎದ್ದ ಬೆನ್ನಲ್ಲೇ ಕುಮ್ಕಿ ಆನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಅಂತೆಯೇ ಸೆರೆ ಹಿಡಿದು ಈಗ ಬೇರೆಡೆ ಶಿಫ್ಟ್ ಮಾಡಲಾಗಿದೆ.

suddiyaana