ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ
ಕಾಂಗ್ರೆಸ್ ಸರ್ಕಾರದ ಮೊದಲ ರಾಜ್ಯ ಬಜೆಟ್ ಅಧಿವೇಶನ ಜುಲೈ 3 ರಿಂದ ಆರಂಭವಾಗಲಿದೆ. ಜುಲೈ 7 ರಂದು ಬಜೆಟ್ ಮಂಡಿಸಲಾಗುವುದು ಎಂದು ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ; 24/7 ಹೋಟೆಲ್ ತೆರೆಯಲು ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಿಬಿಹೆಚ್ಎ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಜೆಟ್ ಅಧಿವೇಶನವು ಜುಲೈ 3 ರಿಂದ ಆರಂಭವಾಗಲಿದ್ದು ಬಜೆಟ್ ಮಂಡನೆಯನ್ನು ಜುಲೈ 7 ಮಂಡಿಸಲು ವಿವಿಧ ಹಂತದ ಸಭೆಗಳನ್ನು ಕೈಗೊಳ್ಳಲಾಗುತ್ತಿದೆ. ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಂಡು ಬಜೆಟ್ ಅಧಿವೇಶನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತದೆ. ಬಜೆಟ್ ಅಧಿವೇಶನ ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಲಿದ್ದಾರೆ. ಅಧಿವೇಶನದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚೆ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗಲಿದೆ. ರೈತರಿಗೆ ಬಿತ್ತನೆ ಬೀಜ, ಕೀಟನಾಶಕಗಳ ಪೂರೈಕೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಪ್ರವಾಹದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಲಾಗಿದೆ. ಮಳೆ ಆರಂಭವಾಗುತ್ತಿದ್ದಂತೆ ಕೃಷಿ ಚಟುವಟಿಕೆ ಕೂಡ ಆರಂಭವಾಗುತ್ತಿದ್ದು, ಇದಕ್ಕೆ ಪೂರಕವಾದ ಸಿದ್ಧತೆ ಕೈಗೊಳ್ಳಿ. ರೈತರಿಗೆ ಕೃಷಿಗೆ ಪೂರಕವಾದ ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ವಿತರಣೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಿ ಮತ್ತು ಆಕಸ್ಮಿಕ ಅತೀವೃಷ್ಟಿ ತಡೆಗೂ ಸಿದ್ದತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.