ರೈಲು ದುರಂತ ಸಂಭವಿಸಿ ನಾಲ್ಕು ದಿನಗಳಾದರೂ 150 ಮೃತದೇಹಗಳ ಗುರುತೇ ಸಿಗುತ್ತಿಲ್ಲ!
ಒಡಿಶಾದ ಬಾಲಾಸೋರ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ ಮೂರ್ನಾಲ್ಕು ದಿನಗಳೇ ಆಗಿದೆ. ಈ ದುರ್ಘಟನೆಯಲ್ಲಿ 288 ಮಂದಿ ಸಾವನ್ನಪ್ಪಿದ್ದಾರೆ. ಈ 288 ಮೃತದೇಹಗಳಲ್ಲಿ 150 ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಇದು ಒಡಿಶಾ ಸರ್ಕಾರಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.
ಶುಕ್ರವಾರ ಸಂಜೆ ಓಡಿಶಾದ ಬಾಲಾಸೋರ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತ್ತು. ಇದರಲ್ಲಿ 288 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರ ಶವಗಳನ್ನು ಭುವನೇಶ್ವರದಲ್ಲಿರುವ ಏಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ತಂದಿರಿಸಲಾಗಿದೆ. ಮೃತಪಟ್ಟವರ ಸಂಬಂಧಿಕರು ಬಂದು ಈ ಶವಗಳನ್ನು ನೋಡುತ್ತಿದ್ದಾರೆ. ಆದರೆ, ಅವರಿಗೆ ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಕುಸಿಯಿತು ನಿರ್ಮಾಣಗೊಳ್ಳುತ್ತಿರುವ ಸೇತುವೆ – 1,700 ಕೋಟಿ ರೂ. ನೀರಿನಲ್ಲಿ ಹೋಮ
ಅಪಘಾತದ ಭೀಕರತೆಯಿಂದಾಗಿ ಅನೇಕ ಶವಗಳು ಗುರುತು ಸಿಗಲಾರದಷ್ಟು ನಜ್ಜುಗೊಜ್ಜಾಗಿವೆ. ಇದರಿಂದಾಗಿ, ಕೆಲವು ಸಂಬಂಧಿಕರಿಗೆ ಶವಗಳನ್ನು ಗುರುತು ಹಿಡಿಯುವಲ್ಲಿ ಭಾರೀ ಗೊಂದಲವಾಗುತ್ತಿವೆ. ಶವಗಳು ಗುರುತು ಹಿಡಿಯದ ಪರಿಸ್ಥಿತಿಯಲ್ಲಿರುವುದರಿಂದ ಕೆಲವರು ತಮ್ಮ ಸಂಬಂಧಿಕರ ಶವಗಳನ್ನೇ ಗುರುತಿಸದಿರುವಂಥ ಪರಿಸ್ಥಿತಿಯೂ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತ ಒಂದು ಕಡೆ ಶವಗಳನ್ನು ಗುರುತು ಹಿಡಿಯಲಾಗದ ಸ್ಥಿತಿಯಲ್ಲಿದ್ದರೆ, ಇನ್ನೊಂದೆಡೆ ಏಮ್ಸ್ ಆಸ್ಪತ್ರೆಯ ವೈದ್ಯರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಹೊಸ ತಲೆನೋವು ಶುರುವಾಗಿದೆ. ಅಷ್ಟು ಪ್ರಮಾಣ ಶವಗಳನ್ನು ಅವುಗಳ ಸಂಬಂಧಿಕರು ಸಿಗುವವವರೆಗೆ ಕಾಪಾಡುವುದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ.
ಈಬಗ್ಗೆ ಏಮ್ಸ್ ನ ವೈದ್ಯರಾದ ಡಾ. ಪ್ರಭಾಸ್ ರಂಜನ್ ತ್ರಿಪಾಠಿ ಮಾತನಾಡಿದ್ದಾರೆ. ಬೇರೆ ಬೇರೆ ಹವಾಮಾನಗಳಿಗೆ ಹೋಲಿಸಿದರೆ ಬೇಸಗೆಯಲ್ಲಿ ಶವಗಳು ತುಸು ಬೇಗನೇ ಕೊಳೆಯಲಾರಂಭಿಸುತ್ತವೆ. ಈಗಾಗಲೇ ಅಪಘಾತ ನಡೆದು ಮೂರ್ನಾಲ್ಕು ದಿನಗಳೇ ಆಗಿರುವುದರಿಂದ ಶವಗಳು ಕೊಳೆಯಲಾರಂಭಿಸಿವೆ. ಕೆಲವು ದೇಹಗಳನ್ನು ಮಂಜುಗಡ್ಡೆಯಲ್ಲಿ ಇರಿಸಲಾಗಿದ್ದು, ಇನ್ನೂ ಕೆಲವು ದೇಹಗಳನ್ನು ರಾಸಾಯನಿಕಗಳಿಂದ ಸಂರಕ್ಷಿಸಿಡಲಾಗಿದೆ. ಆದರೆ, ಇವೆಲ್ಲವೂ ತಾತ್ಕಾಲಿಕ ಕ್ರಮಗಳು. ಶವಗಳ ಕೊಳೆಯುವಿಕೆಯ ಗತಿಯನ್ನು ಕೊಂಚ ನಿಧಾನವಾಗಿಸಬಹುದೇ ವಿನಃ ಶವಗಳು ಸಂಪೂರ್ಣವಾಗಿ ಕೊಳೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.