ಮಹಾಭಾರತ ಸೀರಿಯಲ್ನ ‘ಶಕುನಿ’ ಪಾತ್ರಧಾರಿ ಇನ್ನಿಲ್ಲ – ನಟ ಗೂಫಿ ಪೈಂತಲ್ ನಿಧನ
ಮಹಾಭಾರತ ಸೀರಿಯಲ್ನಲ್ಲಿ ಶಕುನಿ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ಗೂಫಿ ಪೈಂತಲ್ ಜೂನ್ 5ರಂದು ನಿಧನ ಹೊಂದಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಗೂಫಿ ಅವರು ವಯೋ ಸಹಜ ಕಾಯಿಲೆಯಿಂದ ಬಳುತ್ತಿದ್ದರು. ಆರೋಗ್ಯದಲ್ಲಿ ತೀವ್ರ ರೀತಿಯಲ್ಲಿ ಏರುಪೇರಾಗಿದ್ದರಿಂದ ಗೂಫಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಗೂಫಿ ಅವರ ಸೋದರ ಸಂಬಂಧಿ ಹಿತೇನ್ ಪೈಂತಲ್ ಹೇಳಿದ್ದಾರೆ.
ಇದನ್ನೂ ಓದಿ: 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಸೇತುವೆ ಕುಸಿತ – ಸ್ಥಳೀಯರಿಂದ ಆಕ್ರೋಶ
ಗೂಫಿ ಅವರ ಆರೋಗ್ಯ ಹದಗೆಟ್ಟಿದೆ ಅನ್ನೋ ವಿಚಾರ ವರದಿಯಾಗಿತ್ತು. ಆದರೆ, ಆಸ್ಪತ್ರೆಯಿಂದ ಹುಷಾರಾಗಿ ಮರಳಿ ಬರುತ್ತಾರೆ ಅನ್ನೋ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಕೆಲ ದಿನಗಳ ಹಿಂದೆ ಮಾತನಾಡಿದ್ದ ಹಿತೇನ್, ‘ಗೂಫಿ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಸಾಕಷ್ಟು ಸಮಯದಿಂದ ಆರೋಗ್ಯ ಸರಿ ಇಲ್ಲ. ಈಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ. ಕಳೆದ ಏಳೆಂಟು ದಿನಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರ ಆರೋಗ್ಯ ಸ್ಥಿರ ಸ್ಥಿತಿಗೆ ಬಂದಿದೆ’ ಎಂದಿದ್ದರು. ಈ ಹೇಳಿಕೆ ಅಭಿಮಾನಿಗಳಿಗೆ ಸಮಾಧಾನ ತಂದಿತ್ತು. ಇದೀಗ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಗೂಫಿ ತನ್ನೆಲ್ಲಾ ಅಭಿಮಾನಿಗಳನ್ನು ಅಗಲಿದ್ದಾರೆ.
ಬಿ.ಆರ್. ಚೋಪ್ರಾ ನಿರ್ಮಾಣದ ‘ಮಹಾಭಾರತ್’ (1988) ಸರಣಿ ಎಲ್ಲರ ಗಮನಸೆಳೆದಿತ್ತು. ಮಹಾಭಾರತದಲ್ಲಿ ಬರುವ ಶಕುನಿ ಪಾತ್ರವನ್ನು ಸಮರ್ಥವಾಗಿ ಗೂಫಿ ನಿರ್ವಹಿಸಿದ್ದರು. ‘ಸುಹಾಗ್’, ‘ದಿಲ್ಲಗಿ’ ಮೊದಲಾದ ಸಿನಿಮಾಗಳಲ್ಲಿ ಗೂಫಿ ನಟಿಸಿದ್ದಾರೆ. ‘ಹೆಲೋ ಇನ್ಸ್ಪೆಕ್ಟರ್’ ಹೆಸರಿನ ಸಿಐಡಿ ಧಾರಾವಾಹಿಯಲ್ಲಿ ನಟಿಸಿಯೂ ಅವರು ಗಮನ ಸೆಳೆದಿದ್ದರು. ಇತ್ತೀಚಿನ ವರೆಗೂ ಕಿರುತೆರೆಯಲ್ಲಿ ಗೂಫಿ ಆ್ಯಕ್ಟೀವ್ ಆಗಿದ್ದರು. ಮುಂಬೈನ ಅಂಧೇರಿಯ ಸ್ಮಶಾನದಲ್ಲಿ ಗೂಫಿ ಅವರ ಅಂತಿಮ ವಿಧಿವಿಧಾನ ನೆರವೇರಿದೆ. ಗೂಫಿ ಅವರು ಓರ್ವ ಮಗ ಹಾಗೂ ಸೊಸೆ, ಮೊಮ್ಮಕಳನ್ನು ಅಗಲಿದ್ದಾರೆ.