ರೈಲ್ವೆ ಇಲಾಖೆಯನ್ನೇ ಬೆಚ್ಚಿ ಬೀಳಿಸಿದ್ದವು ಈ ಅಪಘಾತಗಳು – ಟಾಪ್ 10 ದುರಂತಗಳ ಬಗ್ಗೆ ಇಲ್ಲಿದೆ ಮಾಹಿತಿ
ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ನೂರಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಹಾಗಂತ ಇಂತಹದ್ದೊಂದು ಅವಘಡ ಸಂಭವಿಸಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ದೇಶದಲ್ಲಿ ರೈಲು ದುರಂತಗಳಿಂದಾಗಿ ಒಂದೊಂದು ಪ್ರಕರಣದಲ್ಲೂ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಇದು ರೈಲ್ವೆ ಇಲಾಖೆಯ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದ್ದವು. ಈ ಹಿಂದಿನ ಟಾಪ್ 10 ದುರಂತಗಳ ಬಗ್ಗೆ ಇಲ್ಲಿದೆ ಮಾಹಿತಿ.
ರೈಲು ದುರಂತ – 1
1981 ಬಿಹಾರ ರೈಲು ದುರಂತ ಸುಮಾರು 900 ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲೊಂದು ಹಳಿತಪ್ಪಿ ಬಿಹಾರದ ಸಹರ್ಸಾ ಬಳಿ ಬಾಗ್ಮತಿ ನದಿಗೆ ಬಿದ್ದಿತ್ತು. ಇದರಲ್ಲಿ 500 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು ಎಂದು ಅಂದಾಜಿಸಲಾಗಿದೆ.
ರೈಲು ದುರಂತ – 2
1995 ಫಿರೋಜಾಬಾದ್ ರೈಲು ದುರಂತ ದೆಹಲಿಯಿಂದ ಹೊರಟಿದ್ದ ಪುರುಷೋತ್ತಮ್ ಎಕ್ಸ್ಪ್ರೆಸ್ ಉತ್ತರ ಪ್ರದೇಶದ ಫಿರೋಜಾಬಾದ್ ಬಳಿ ನಿಂತಿದ್ದ ಕಾಳಿಂದಿ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಕನಿಷ್ಠ 358 ಜನರು ಸಾವನ್ನಪ್ಪಿದ್ದರು.
ರೈಲು ದುರಂತ – 3
1999 ಗೈಸಲ್ ರೈಲು ದುರಂತ ಗುವಾಹಟಿಯಿಂದ ಸುಮಾರು 310 ಮೈಲಿ ದೂರದಲ್ಲಿರುವ ಅಸ್ಸಾಂನ ಗೈಸಾಲ್ ಬಳಿ 2,500 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ರೈಲುಗಳು ಡಿಕ್ಕಿ ಹೊಡೆದಿದ್ದವು. ಇದರಲ್ಲಿ 290 ಪ್ರಯಾಣಿಕರು ಸಾವನ್ನಪ್ಪಿದ್ದರು. ಅತಿ ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿದ್ದರಿಂದ ರೈಲುಗಳು ಡಿಕ್ಕಿ ಹೊಡೆದು ಸ್ಫೋಟಗೊಂಡವು.
ರೈಲು ದುರಂತ – 4
1998 ಖನ್ನಾ ರೈಲು ದುರಂತ ಕೋಲ್ಕತ್ತಾಗೆ ತೆರಳುತ್ತಿದ್ದ ಜಮ್ಮು ತಾವಿ-ಸೀಲ್ದಾಹ್ ಎಕ್ಸ್ಪ್ರೆಸ್ ಪಂಜಾಬ್ನ ರೈಲ್ವೆಯ ಖನ್ನಾ-ಲುಧಿಯಾನ ವಿಭಾಗದಲ್ಲಿ ಖನ್ನಾ ಬಳಿ ಅಮೃತಸರಕ್ಕೆ ಹೋಗುವಾಗ ಹಳಿತಪ್ಪಿ ಫ್ರಾಂಟಿಯರ್ ಗೋಲ್ಡನ್ ಟೆಂಪಲ್ ಮೇಲ್ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆತ್ತು. 212 ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.
ರೈಲು ದುರಂತ – 5
2002 ಹೌರಾ-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ ಭಾರತದ ಅತ್ಯಂತ ವೇಗದ ರೈಲು ಎಂದು ಪರಿಗಣಿಸಲ್ಪಟ್ಟ ಹೌರಾ-ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ ಗಯಾ ರೈಲು ರಫಿಗಂಜ್ ನಿಲ್ದಾಣದ ಬಳಿ ರಾತ್ರಿ 10.40 ಕ್ಕೆ ಹಳಿತಪ್ಪಿದ ಪರಿಣಾಮ 140 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ರೈಲು ದುರಂತ – 6
2005 ವಲಿಗೊಂಡ ರೈಲು ದುರಂತ 29 ಅಕ್ಟೋಬರ್ 2005 ರಂದು ಹಠಾತ್ ಪ್ರವಾಹದಿಂದ ಸಣ್ಣ ರೈಲು ಸೇತುವೆಯನ್ನು ಕೊಚ್ಚಿಕೊಂಡು ಹೋಯಿತು. ಇದರ ಮೇಲೆ ಪ್ರಯಾಣಿಸುತ್ತಿದ್ದ “ಡೆಲ್ಟಾ ಫಾಸ್ಟ್ ಪ್ಯಾಸೆಂಜರ್” ರೈಲು ಮಾರ್ಗದ ಹಾನಿಗೊಳಗಾದ ಪರಿಣಾಮ ರೈಲು ಹಳಿತಪ್ಪಿ, ಕನಿಷ್ಠ 114 ಜನರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ರೈಲು ದುರಂತ – 7
2010 ಜ್ಞಾನೇಶ್ವರಿ ಎಕ್ಸ್ಪ್ರೆಸ್ ದುರಂತ ಮುಂಬೈಗೆ ಹೋಗುವ ಹೌರಾ ಕುರ್ಲಾ ಲೋಕಮಾನ್ಯ ತಿಲಕ್ ಜ್ಞಾನೇಶ್ವರಿ ಸೂಪರ್ ಡೀಲಕ್ಸ್ ಎಕ್ಸ್ಪ್ರೆಸ್ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖೇಮಶುಲಿ ಮತ್ತು ಸರ್ದಿಹಾ ನಡುವೆ ಮುಂಜಾನೆ 1.30 ಕ್ಕೆ ಸಂಭವಿಸಿದ ಸ್ಫೋಟದಿಂದ ಹಳಿತಪ್ಪಿ, ನಂತರ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಕನಿಷ್ಠ 170 ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ವರದಿಯಾಗಿದೆ.
ರೈಲು ದುರಂತ – 8
2010 ಸೈಂಥಿಯಾ ರೈಲು ಅಪಘಾತ ಜುಲೈ 19, 2010 ರಂದು, ಪಶ್ಚಿಮ ಬಂಗಾಳದ ಸೈಂಥಿಯಾದಲ್ಲಿ ಉತ್ತರ ಬಂಗಾ ಎಕ್ಸ್ಪ್ರೆಸ್ ಮತ್ತು ವನಂಚಲ್ ಎಕ್ಸ್ಪ್ರೆಸ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸುಮಾರು 63 ಜನರು ಸಾವನ್ನಪ್ಪಿದರು ಮತ್ತು 165 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ರೈಲು ದುರಂತ – 9
2012 ಹಂಪಿ ಎಕ್ಸ್ಪ್ರೆಸ್ ಅಪಘಾತ 22 ಮೇ 2012 ರಂದು ಹುಬ್ಬಳ್ಳಿ-ಬೆಂಗಳೂರು ಹಂಪಿ ಎಕ್ಸ್ಪ್ರೆಸ್ ಆಂಧ್ರಪ್ರದೇಶದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿದ್ದವು, ಮತ್ತು ಅವುಗಳಲ್ಲಿ ಒಂದು ಬೋಗಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 25 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು ಮತ್ತು ಸುಮಾರು 43 ಮಂದಿ ಗಾಯಗೊಂಡ್ಡಿದ್ದರು.
ರೈಲು ದುರಂತ – 10
2016 ಇಂದೋರ್ ಪಾಟ್ನಾ ದುರಂತ ಇಂದೋರ್-ಪಾಟ್ನಾ ಎಕ್ಸ್ಪ್ರೆಸ್ (ರೈಲು ಸಂಖ್ಯೆ 19321), 20 ನವೆಂಬರ್, 2016 ರಂದು ಭಾರತದ ಕಾನ್ಪುರದ ಪುಖ್ರಾಯನ್ ಬಳಿ ಹಳಿತಪ್ಪಿ ಕನಿಷ್ಠ 150 ಜನರು ಸಾವನ್ನಪ್ಪಿದರು ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.