ಒಡಿಶಾದಲ್ಲಿ ರೈಲು ದುರಂತ – 300 ಜನರ ಜೀವ ಉಳಿಯಲು ಕಾರಣನಾದ ಸ್ಥಳೀಯ ವ್ಯಕ್ತಿ
ಬಾಲಸೋರ್: ಒಡಿಶಾದ ಬಾಲಸೋರ್ ನಲ್ಲಿ ನಡೆದ ಭೀಕರ ರೈಲು ಅಪಘಾತದಿಂದಾಗಿ ಇಡೀ ದೇಶವೇ ಬೆಚ್ಚಿಬಿದ್ದಿದೆ. 280 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ಮುಗಿದಿದ್ದು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಒಡಿಶಾದ ರೈಲು ದುರಂತ – ವರದಿ ಸಲ್ಲಿಸುವಂತೆ ಸಿಎಸ್‌ಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಈ ದುರಂತ ಸಂಭವಿಸುವ ವೇಳೆ ಸಾಕಷ್ಟು ಮಂದಿ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಇಲ್ಲಿನ ಸ್ಥಳೀಯ ನಿವಾಸಿ ಗಣೇಶ್ ಎಂಬುವವರು ಅಪಘಾತ ಸಂಭವಿಸಿದ ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಧಾವಿಸಿ ಸುಮಾರು 200 – 300 ಜನರ ಜೀವ ಉಳಿಸಲು ಕಾರಣವಾಗಿದ್ದಾರೆ. ಇವರ ಸಾಹಸಕ್ಕೆ ಇದೀಗ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಗಣೇಶ್ ಅವರಿಗೆ ಅಪಘಾತದ ವೇಳೆ ದೊಡ್ಡ ಶಬ್ದ ಕೇಳಿದೆ. ಈ ವೇಳೆ ಅವರು ಘಟನಾ ಸ್ಥಳಕ್ಕೆ ಓಡಿ ಹೋಗಿದ್ದಾರೆ. ಈ ಘಟನೆಯನ್ನು ನೋಡಿ ಗಣೇಶ್ ಅವರಿಗೆ ದಿಕ್ಕೇ ತೋಚದಂತಾಗಿದೆ. ಬಳಿಕ ಅವರು ಚೆಲ್ಲಾ ಪಿಲ್ಲಿಯಾಗಿದ್ದ ಬೋಗಿಗಳ ಬಳಿ ತೆರಳಿ ಒಬ್ಬೊಬ್ಬರನ್ನೇ ಹೊರಗೆ ತರೆತಂದಿದ್ದಾರೆ. ಗಣೇಶ್ ಅವರು ಜನರನ್ನು ರಕ್ಷಣೆ ಮಾಡುತ್ತಿದ್ದಂತೆ ಸ್ಥಳೀಯರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ಗಣೇಶ್ ಅವರು 200 ರಿಂದ 300 ಜನರ ಪ್ರಾಣ ಉಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ರಕ್ತದ ಅಗತ್ಯವಿದ್ದು, ರಕ್ತ ನೀಡಲು ಜನ ಸಾಲು ಸಾಲಾಗಿ ಮುಂದೆ ಬಂದಿದ್ದಾರೆ. ಈ ಮೂಲಕ ನೋವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.