ಕಾಂಗ್ರೆಸ್ ಐದು ಗ್ಯಾರಂಟಿಗಳತ್ತ ಎಲ್ಲರ ಚಿತ್ತ – ಬಸ್ ಪಾಸ್ ಖರೀದಿಯಿಂದ ಹಿಂದೆ ಸರಿದ ಮಹಿಳೆಯರು
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಐದು ಗ್ಯಾರಂಟಿ ಪ್ರಚಂಡ ಗೆಲುವು ನೀಡಿವೆ. ಇಡೀ ರಾಜ್ಯಕ್ಕೆ ರಾಜ್ಯವೇ ಎದುರು ನೋಡುತ್ತಿರುವ ಗ್ಯಾರಂಟಿ, ಹಾದಿ ಬೀದಿಯಲ್ಲಿ ಚರ್ಚೆ ಆಗುತ್ತಿವೆ. ಇದೀಗ ಇದೇ ಗ್ಯಾರಂಟಿ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಲಿದ್ದು, ಸಭೆ ಬಳಿಕ ಯೋಜನೆಗಳು ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೂಡ ಒಂದು. ಇದೀಗ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮಹಿಳಾ ಮಣಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಮಹಿಳೆಯರು ಮಾಸಿಕ ಬಸ್ ಪಾಸ್ ಗಳ ಖರೀದಿಯಿಂದ ಹಿಂದೆ ಸರಿದು, ಟಿಕೆಟ್ ಗಳನ್ನು ಖರೀದಿ ಮಾಡುತ್ತಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಇಂದು ರಟ್ಟಾಗುತ್ತಾ ʼಕೈʼ ಗ್ಯಾರಂಟಿ ಗುಟ್ಟು? – ಇಂದು ಸಚಿವ ಸಂಪುಟ ಸಭೆ ಕರೆದ ಸಿಎಂ ಸಿದ್ದರಾಮಯ್ಯ
ಬಿಎಂಟಿಸಿಗಳ ಸಾಮಾನ್ಯ ಬಸ್’ಗೆಳಿಗೆ ಪ್ರತೀ ತಿಂಗಳು 1,050 ರುಪಾಯಿ ವೆಚ್ಚವಾಗುತ್ತದೆ. ಶುಕ್ರವಾರ ಸರ್ಕಾರ ಸಂಪುಟ ಸಭೆ ನಡೆಸುತ್ತಿದ್ದು, ಯೋಜನೆ ಘೋಷಣೆಯಾಗುವ, ಜಾರಿಯಾಗುವ ನಿರೀಕ್ಷೆಯಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರುವ ವಿಶ್ವಾಸವಿದೆ. ಯೋಜನೆ ಘೋಷಣೆಯಾಗಿದ್ದೇ ಆದರೆ, ಮಾಸಿಕ ಪಾಸ್ ವ್ಯರ್ಥವಾಗುತ್ತದೆ. ಹೀಗಾಗಿ ಖರೀದಿ ಮಾಡುತ್ತಿಲ್ಲ ಎಂದು ಮಹಿಳಾ ಮಣಿಗಳು ಹೇಳುತ್ತಿದ್ದಾರೆ.
ಸಾಮಾನ್ಯವಾಗಿ ಪ್ರತೀ ತಿಂಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ತಿಂಗಳ 30ನೇ ತಾರೀಖಿನಂದು ಪಾಸ್ ಖರೀದಿ ಮಾಡತ್ತಿದ್ದೆವು. ಸರ್ಕಾರ ಉಚಿತ ಪ್ರಯಾಣ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಯೋಜನೆ ಜಾರಿಗಾಗಿ ಕಾಯುತ್ತಿದ್ದೇವೆ. ಹೀಗಾಗಿ ಟಿಕೆಟ್ ಖರೀದಿ ಮಾಡಿ ಪ್ರಯಾಣಿಸುತ್ತಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ.
ಇನ್ನು ಈ ಯೋಜನೆಗಳ ಕುರಿತ ವರದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಸಲ್ಲಿಸಿದ್ದು, ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆಂದು ಸಾರಿಗೆ ನಿಗಮದ ಮೂಲಗಳು ಮಾಹಿತಿ ನೀಡಿವೆ. ಉಚಿತ ಪ್ರಯಾಣ ಯೋಜನೆಯಿಂದ ಸರ್ಕಾರಕ್ಕೆ 3,500 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತಾದರೂ, ಅಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ 4,200 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಸ್ ನಿಗಮಗಳ ಅಧಿಕಾರಿಗಳು ಸೂಚಿಸಿರುವ ಮೂರು ಆಯ್ಕೆಗಳಲ್ಲಿ ಒಂದನ್ನು ಸಿದ್ದರಾಮಯ್ಯ ಮತ್ತು ರಾಮಲಿಂಗಾ ರೆಡ್ಡಿ ಅವರು ಆಯ್ಕೆ ಮಾಡಿ ಉಚಿತ ಪ್ರಯಾಣದ ಘೋಷಣೆ ಮಾಡುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.