ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ತೀವ್ರಗೊಂಡ ಆಗ್ರಹ – ಬೆಳಗಾವಿ, ಮೈಸೂರಲ್ಲೂ ಪ್ರತಿಭಟನೆ
ಕುಸ್ತಿ ಪಟುಗಳ ಪರವಾಗಿ ಭಾರತೀಯ ಕಿಸಾನ್ ಯುನಿಯನ್ನಿಂದ ಮಹಾಪಂಚಾಯಿತಿ

ಬ್ರಿಜ್ ಭೂಷಣ್ ಶರಣ್ ಸಿಂಗ್  ಬಂಧನಕ್ಕೆ ತೀವ್ರಗೊಂಡ ಆಗ್ರಹ – ಬೆಳಗಾವಿ, ಮೈಸೂರಲ್ಲೂ ಪ್ರತಿಭಟನೆಕುಸ್ತಿ ಪಟುಗಳ ಪರವಾಗಿ ಭಾರತೀಯ ಕಿಸಾನ್ ಯುನಿಯನ್ನಿಂದ ಮಹಾಪಂಚಾಯಿತಿ

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ರಾಜಕೀಯ ನಾಯಕರು, ಸಿನಿಮಾ ನಟರು, ಭಾರತೀಯ ಕಿಸಾನ್ ಯೂನಿಯನ್ ಕುಸ್ತಿಪಟುಗಳ ಬೆನ್ನಿಗೆ ನಿಂತಿದೆ. ಕರ್ನಾಟಕ ಸೇರಿದಂತೆ ರಾಷ್ಟ್ರದ ಹಲವೆಡೆ ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆಗಳೂ ನಡೆಯುತ್ತಿವೆ. ಜೂನ್ 1ರಂದು ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಭಾರತೀಯ ಕಿಸಾನ್ ಯುನಿಯನ್​ನಿಂದ ಮಹಾಪಂಚಾಯಿತಿ ನಡೆಸಲಾಯ್ತು. ಈ ವೇಳೆ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವಂತೆ ರಾಷ್ಟ್ರಪತಿಗಳನ್ನ ಭೇಟಿಯಾಗಿ ಬೇಡಿಕೆ ಇಡಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ:  ಭಾರತೀಯ ಕುಸ್ತಿಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಂಬಲ – ಇನ್ನಾದರೂ ಸರ್ಕಾರ ಮಣಿಯುತ್ತಾ?

ಬ್ರಿಜ್ ಭೂಷಣ ಸಿಂಗ್ ಬಂಧನಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಬೇಟಿ ಬಚಾವೋ, ಬೇಟಿ ಪಡಾವೋ ಅಂತಾರೆ. ಏಪ್ರಿಲ್ 24ರಿಂದ ನವದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತೆ ಎಂದು ಕೇಂದ್ರ ಸರ್ಕಾರಕ್ಕೆ ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇನ್ನು ಮೈಸೂರಿನ ಗಾಂಧಿ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ. ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಪ್ರೊಫೆಸರ್ ಕೆ ಎಸ್ ಭಗವಾನ್ ಸೇರಿ ಹಲವರು ಭಾಗಿಯಾಗಿದ್ದರು.

ಈ ನಡುವೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ಬ್ರಿಜ್ ಭೂಷಣ್ ವಿರುದ್ಧ ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನ ಬಗ್ಗೆ ತನಿಖೆ ನಡೆಯತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮತ್ತೊಂದೆಡೆ ಆರಂಭದಿಂದಲೂ ಲೈಂಗಿಕ ದೌರ್ಜನ್ಯ ಆರೋಪ ತಳ್ಳಿ ಹಾಕುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್, ಕುಸ್ತಿಪಟುಗಳ ವಿರುದ್ಧ ಕಿಡಿ ಕಾರಿದ್ದಾರೆ. ನಿಮ್ಮ ಹತ್ರ ಸಾಕ್ಷಿ ಇದ್ದರೆ ಅದನ್ನ ಪೊಲೀಸರಿಗೆ ನೀಡಿ. ಆದರೆ, ನನ್ನ ವಿರುದ್ಧ ಯಾವ ಸಾಕ್ಷಿಯೂ ಇಲ್ಲ.. ಹಾಗೇನಾದರೂ ನನ್ನ ವಿರುದ್ಧದ ಆರೋಪ ಸಾಬೀತಾದರೆ ನನ್ನನ್ನ ನೇಣಿಗೆ ಹಾಕಿ ಎಂದು ಸವಾಲು ಹಾಕಿದ್ದಾರೆ.

 

suddiyaana