ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲವೇ? – ಕಾಂಗ್ರೆಸ್‌ ಗ್ಯಾರಂಟಿ ವಿರುದ್ದ ಹೆಚ್‌ಡಿಕೆ ಟ್ವೀಟ್‌ ಬಾಣ!

ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲವೇ? – ಕಾಂಗ್ರೆಸ್‌ ಗ್ಯಾರಂಟಿ ವಿರುದ್ದ ಹೆಚ್‌ಡಿಕೆ ಟ್ವೀಟ್‌ ಬಾಣ!

ಬೆಂಗಳೂರು: ದಿನಕಳೆದಂತೆ ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಿರೀಕ್ಷೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಆಕ್ರೋಶವೂ ವ್ಯಕ್ತವಾಗುತ್ತಿದೆ. ಇದೀಗ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿಯವರು ಕಾಂಗ್ರೆಸ್‌ ನ ಐದು ಗ್ಯಾರಂಟಿಗಳ ಜಾರಿ ವಿಳಂಬ ಮಾಡುತ್ತಿರುವ ಕುರಿತು ಕಿಡಿಕಾರಿದ್ದಾರೆ. ಎಲ್ಲವೂ ಉಚಿತವಾಗಿ ನೀಡುತ್ತೇವೆ ಎಂದು ಹೇಳಿ ಈಗ ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2,000 ಮುಖಬೆಲೆಯ ನೋಟು ಸ್ಥಗಿತ – ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ನೋಟು ವಿನಿಮಯ ಸಂಕಷ್ಟ!

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಹೆಚ್‌ಡಿಕೆ, ಕಾಂಗ್ರೆಸ್ ಗೆ 135 ಸೀಟು ಕೊಟ್ಟ ಜನತೆಯ ‘ಗ್ಯಾರಂಟಿ ಬೇಡಿಕೆ’ಯಲ್ಲಿ ನ್ಯಾಯವಿದೆ. 5 ಗ್ಯಾರಂಟಿ ಜಾರಿ ಕಾಂಗ್ರೆಸ್ ಸರಕಾರದ ಜವಾಬ್ದಾರಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗುವುದಕ್ಕೆ ಮುನ್ನ ಸಿದ್ದರಾಮಯ್ಯ , ಡಿ.ಕೆ ಶಿವಕುಮಾರ್‌ ಅವರು ಸಹಿ ಮಾಡಿಕೊಟ್ಟ ಕಾರ್ಡುಗಳು ಜನರ ಬಳಿ ಇವೆ. ಆ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ದಿನನಿತ್ಯವೂ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಿರೀಕ್ಷೆಯೂ ಮೇರೆ ಮೀರುತ್ತದೆ. ಆಕ್ರೋಶವೂ ಹೆಚ್ಚುತ್ತಿದೆ. ಜನಾಕ್ರೋಶಕ್ಕೆ ಸಬೂಬು ಸರಿಯಲ್ಲ. ಏಕೆಂದರೆ, ನಿರೀಕ್ಷೆ ಮೂಡಿಸಿದ್ದು ಇವರೇ. ಈಗ ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ. ಗ್ಯಾರಂಟಿಗಳ ಬಗ್ಗೆ ಮಾಧ್ಯಮಗಳಲ್ಲಿ ಅಬ್ಬರಿಸಿದ ಇವರೇ, ಈಗ ಮೀನಾಮೇಷ ಎಂದರೆ ಜನ ಒಪ್ಪುವರೇ? ಎಂದು ಕಿಡಿಕಾರಿದ್ದಾರೆ.

ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ ಎಂದ ಮುಖ್ಯಮಂತ್ರಿಗಳಿಗೆ ಈಗ ಗ್ಯಾರಂಟಿಗಳ ಬಗ್ಗೆ ದಿವ್ಯಮೌನವೇಕೆ? ಅವರ ಅಕ್ಕಪಕ್ಕದವರ ಹೇಳಿಕೆಗಳನ್ನು ಜನರು ನಂಬುತ್ತಿಲ್ಲ. ಮುಖ್ಯಮಂತ್ರಿಗಳೇ ಜನರಿಗೆ ನೇರವಾಗಿ ಹೇಳಲಿ, ಜನರಲ್ಲಿ ವಿಶ್ವಾಸ ಮೂಡಿಸಲಿ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಕಾಂಗ್ರೆಸ್ ಕೊಟ್ಟ ‘ಗ್ಯಾರಂಟಿ ಜಾಹೀರಾತು’ಗಳೂ ಇನ್ನೂ ಜನಮಾನಸದಿಂದ ಮಾಸಿಲ್ಲ. ಅದೇ ರೀತಿ ಸ್ವತಃ ಮುಖ್ಯಮಂತ್ರಿಗಳೇ ಜೂನ್ 1ಕ್ಕೆ ಜಾರಿ ಮಾಡುವ ಬಗ್ಗೆ ಜಾಹೀರಾತು ನೀಡಿ ಜನರಿಗೆ ಖಾತರಿ ಕೊಡಲಿ. ವಿಳಂಬದಿಂದ ಸರಕಾರದ ವಿಶ್ವಾಸಾರ್ಹತೆಗೆ ಪೆಟ್ಟು ಬೀಳುವುದೇ ಹೆಚ್ಚು. ಜನರಿಗೆ ಅಭದ್ರತೆಯ ಗ್ಯಾರಂಟಿ ಬೇಡವೇ ಬೇಡ ಎಂದು ಹೇಳಿದ್ದಾರೆ.

ಅದು ಬಿಟ್ಟು ‘ಕೆಲ ಸಚಿವರು, ಶಾಸಕ’ರನ್ನು ನನ್ನ ಮೇಲೆ ಛೂ ಬಿಟ್ಟರೆ ಪ್ರಯೋಜನವಿಲ್ಲ. ಅಂಥ ರಾಜಕಾರಣ ಉಪಯೋಗವೂ ಇಲ್ಲ. ಗ್ಯಾರಂಟಿಗಳ ಬಗ್ಗೆ ಜನಕ್ಕೆ ಬೆಟ್ಟದಷ್ಟು ನಿರೀಕ್ಷೆ ಇದೆ. ಜಾರಿ ಮಾಡಿ, ಅದರ ಹೊರತಾಗಿ ಈ  ಭರವಸೆಗಳೇ ಅಗಮ್ಯಗೋಚರವಾಗಿ ಗಮ್ಯವೇ ಇಲ್ಲದ ಆಡಳಿತ ಕೊಡುವುದು ಬೇಡ. ಇಷ್ಟೇ ನನ್ನ ಕಾಳಜಿ ಎಂದು ಹೆಚ್.‌ ಡಿ ಕುಮಾರಸ್ವಾಮಿ ಟ್ವೀಟ್‌ ನಲ್ಲಿ ಹೇಳಿದ್ದಾರೆ.

suddiyaana