ಚೆನ್ನೈ ಗೆದ್ದ ಖುಷಿಯಲ್ಲಿ ಜಡೇಜಾರನ್ನ ತಬ್ಬಿ ಕಣ್ಣೀರಿಟ್ಟ ಧೋನಿ – ನಿವೃತ್ತಿಗೆ ಇದು ಸರಿಯಾದ ಸಮಯ ಎಂದಿದ್ದೇಕೆ ಮಾಹಿ?
ಒಂದು ಓವರ್. ಎರಡೂ ತಂಡದ ಆಟಗಾರರ ಎದೆಯಲ್ಲಿ ಡವಡವ. ಗ್ಯಾಲರಿಯಲ್ಲಿ ಕುಳಿತಿದ್ದ ಅಭಿಮಾನಿಗಳಿಗೆ ಕ್ಷಣ ಕ್ಷಣಕ್ಕೂ ಕುತೂಹಲ. ಕೊನೆಗೆ 2 ಎಸೆತದಲ್ಲಿ 10 ರನ್ ಗಳು ಬೇಕು. ಯಾವ ಟೀಂ ಗೆಲ್ಲುತ್ತೆ ಎಂದು ಕ್ರಿಕೆಟ್ ಪ್ರೇಮಿಗಳೆಲ್ಲಾ ತುದಿಗಾಲಲ್ಲಿ ನಿಂತಿದ್ದರು. ಆದರೆ ಅದೃಷ್ಟ ಚೆನ್ನೈ ತಂಡದ ಕೈ ಹಿಡಿದಿತ್ತು. ರವೀಂದ್ರ ಜಡೇಜಾರ ಅಮೋಘ ಪ್ರದರ್ಶನ ಧೋನಿ ಪಡೆಯನ್ನ ಮತ್ತೊಮ್ಮೆ ಟ್ರೋಫಿಗೆ ಮುತ್ತಿಡುವಂತೆ ಮಾಡಿತ್ತು.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯ ನಿಜಕ್ಕೂ ರಣರೋಚಕವಾಗಿತ್ತು. ಎಂಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ರಣರೋಚಕ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್ಕೆ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ 5 ವಿಕೆಟ್ಗಳಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಈ ಪಂದ್ಯದಲ್ಲಿ ಯಾರೂ ಊಹಿಸಲಾಗದ ರೀತಿಯಲ್ಲಿ ಚೆನ್ನೈ ಗೆದ್ದಿದ್ದು ವಿಶೇಷ. ರವೀಂದ್ರ ಜಡೇಜಾ (Ravindra Jadeja) ಪಂದ್ಯವನ್ನು ಗೆಲ್ಲಿಸಿ ಹೀರೋ ಆದರು. ಕೊನೆಯ ಓವರ್ನ 6 ಎಸೆತವಂತು ಅಭಿಮಾನಿಗಳನ್ನು ಮಾತ್ರವಲ್ಲದೆ ಎರಡೂ ತಂಡದ ಆಟಗಾರರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು.
ಇದನ್ನೂ ಓದಿ : ಕುಸ್ತಿಪಟುಗಳ ಮೇಲೆ ಗುಂಡು ಹಾರಿಸುತ್ತೇವೆ ಎಂದ ಮಾಜಿ ಡಿಜಿಪಿ- ಬುಲೆಟ್‌ಗೆ ಎದೆಯೊಡ್ಡಲು ಸಿದ್ದ ಎಂದ ಬಜರಂಗ್ ಪೂನಿಯಾ
ಕೊನೆಯ ಎರಡು ಎಸೆತದಲ್ಲಿ ಚೆನ್ನೈಗೆ ಗೆಲ್ಲಲು 10 ರನ್ಗಳು ಬೇಕಾಗಿದ್ದವು. ಫಾರ್ಮ್ನಲ್ಲಿ ಇಲ್ಲದ ಜಡೇಜಾ ಕ್ರೀಸ್ನಲ್ಲಿದ್ದರು. ಹೀಗಾಗಿ ಗುಜರಾತ್ ಮತ್ತೊಮ್ಮೆ ಫೈನಲ್ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಸಿಎಸ್ಕೆ ಸೋಲಿನ ಸನಿಹದಲ್ಲಿದೆ ಎಂದು ನಿರಾಸೆಗೊಂಡಿದ್ದರು. ಆದರೆ, ಅನೇಕರ ಲೆಕ್ಕಚಾರವನ್ನು ಜಡ್ಡು ತಲೆಕೆಳಗಾಗಿಸಿದರು. ಮೋಹಿತ್ ಶರ್ಮಾ ಬೌಲಿಂಗ್ನ 5ನೇ ಎಸೆತದಲ್ಲಿ ಸಿಕ್ಸ್ ಮತ್ತು ಕೊನೆಯ ಎಸೆತದಲ್ಲಿ ಫೋರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಇದಕ್ಕೂ ಮುನ್ನ ಔಟ್ ಆಗಿದ್ದ ಎಂಎಸ್ ಧೋನಿ ಡಗೌಟ್‌ನಲ್ಲಿ ಕೂತು ಪ್ರಾರ್ಥಿಸುತ್ತಿರುವುದು ಕಂಡು ಬಂತು. ಗೆದ್ದ ತಕ್ಷಣ ಜಡೇಜಾ ಅವರನ್ನು ಎತ್ತಿ ವಿಶೇಷವಾಗಿ ಸಂಭ್ರಮಿಸಿದರು. ಇದರ ಜೊತೆಗೆ ಕಣ್ಣೀರು ಕೂಡ ಇತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
We are not crying, you are 🥹
The Legend continues to grow 🫡#TATAIPL | #Final | #CSKvGT | @msdhoni | @ChennaiIPL pic.twitter.com/650x9lr2vH
— IndianPremierLeague (@IPL) May 30, 2023
ಭಾನುವಾರವೇ ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯ ಕಾರಣದಿಂದ ಸೋಮವಾರಕ್ಕೆ ಮುಂದೂಡಲಾಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಪರ ಯುವ ಆಟಗಾರ ಸಾಯಿ ಸುದರ್ಶನ್ ಅಮೋಘ ಆಟ ಪ್ರದರ್ಶಿಸಿದರು. ಇವರ ಬಿರುಸಾದ ಬ್ಯಾಟಿಂಗ್ನಿಂದಾಗಿ 200 ರನ್ ಗಡಿ ದಾಟಿತು. 96 ರನ್ ಮಾಡಿದ ಸುದರ್ಶನ್ ಫೈನಲ್ ಪಂದ್ಯದ ಹೀರೋ ಆದರು. ಇದರ ಜೊತೆಗೆ ವೃದ್ಧಿಮಾನ್ ಸಾಹ 54, ಶುಭಮನ್ ಗಿಲ್ 39, ಹಾರ್ದಿಕ್ ಪಾಂಡ್ಯ 21 ರನ್ಗಳ ಕಾಣಿಕೆ ನೀಡಿದರು. ಜಿಟಿ 20 ಓವರ್ಗಳಲ್ಲಿ 4 ವಿಕೆಟ್ಗೆ 214 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಲು ಬಂದ ಚೆನ್ನೈಗೆ ಮಳೆ ಅಡ್ಡಿ ಪಡಿಸಿತು. 2 ಗಂಟೆಗಳ ಕಾಲ ಆಟ ನಿಂತ ಕಾರಣ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಚೆನ್ನೈಗೆ 15 ಓವರ್ಗಳಲ್ಲಿ 171 ರನ್ ಗುರಿ ನೀಡಲಾಯಿತು. ಅದರಂತೆ ಕ್ರೀಸ್ಗೆ ಬಂದ ಗಾಯಕ್ವಾಡ್ ಹಾಗೂ ಕಾನ್ವೆ ಸ್ಫೋಟಕ ಬೌಂಡರಿ, ಸಿಕ್ಸರ್ಗಳಿಂದಲೇ ರನ್ ಗಳಿಸಿದರು. ಮೊದಲ ವಿಕೆಟ್ಗೆ ಬಿರುಸಿನ 71 ರನ್ ಮಾಡಿದರು. ಗಾಯಕ್ವಾಡ್ 16 ಎಸೆತಗಳಲ್ಲಿ 26 ರನ್ ಮಾಡಿದರೆ, ಕಾನ್ವೆ 25 ಎಸೆತಗಳಲ್ಲಿ 47 ರನ್ ಚಚ್ಚಿದರು. ಇದಾದ ಬಳಿಕ ಶಿವಂ ದುಬೆ 32, ಅಜಿಂಕ್ಯಾ ರಹಾನೆ 27, ಅಂಬಟಿ ರಾಯುಡು 19 ಹಾಗೂ ರವೀಂದ್ರ ಜಡೇಜಾ 15 ರನ್ ಮಾಡಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.
ಮತ್ತೊಂದೆಡೆ ಐಪಿಎಲ್ 2023 ಟೂರ್ನಿ ಆರಂಭವಾದಾಗಿನಿಂದ ಇದು ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿತ್ತು. ಆದರೆ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಧೋನಿ, ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ನನಗೆ ನಿವೃತ್ತಿ ಘೋಷಿಸಲು ಇದು ನನಗೆ ಸರಿಯಾದ ಸಮಯ. ಆದರೆ, ಈ ವರ್ಷ ನಾನು ಎಲ್ಲೇ ಹೋಗಿದ್ದರು ನನ್ನ ಮೇಲೆ ಪ್ರೀತಿ ಮತ್ತು ವಾತ್ಸಲ್ಯ ತೋರಿಸಿದರು. ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಹೇಳುವುದು ಸುಲಭದ ವಿಷಯ, ಆದರೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಷ್ಟಪಟ್ಟು ಮುಂದಿನ ಐಪಿಎಲ್ ಆಡುವುದು. ಇದು ನನ್ನ ದೇಹಕ್ಕೆ ಸುಲಭವಾಗುವುದಿಲ್ಲ. ಆದರೆ, ಅಭಿಮಾನಿಗಳಿಗೆ ನನ್ನಿಂದ ಉಡುಗೊರೆಯಾಗಲಿದೆ. ನಾನು ಈ ಬಾರಿ ಮೊದಲ ಪಂದ್ಯ ಆಡುವಾಗ ಎಲ್ಲರೂ ನನ್ನ ಹೆಸರನ್ನು ಕೂಗುತ್ತಿದ್ದರು. ನಿಜ ಹೇಳಬೇಕೆಂದರೆ ಆಗ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ಹಾಗಾಗಿ ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿದ್ದೆ. ಅಭಿಮಾನಿಗಳ ಈ ಪ್ರೀತಿಯನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡಿದ್ದೇನೆ. ಇಂದು ನಾನು ಏನಾಗಿದ್ದೇನೆ ಅದಕ್ಕೆ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ. ಅಭಿಮಾನಿಗಳು ನನ್ನ ವೃತ್ತಿ ಜೀವನದ ಪ್ರಮುಖ ಭಾಗ ಎಂದು ಧೋನಿ ಭಾವುಕವಾಗಿ ಮಾತನಾಡಿದ್ದಾರೆ.