ಮೂರನೇ ಬಾರಿಗೆ ರೆಸೆಪ್ ತಯ್ಯಿಪ್ ಟರ್ಕಿ ಅಧ್ಯಕ್ಷ – ಕಾಶ್ಮೀರ ವಿಚಾರವಾಗಿ ಮತ್ತೆ ಪಾಕ್ ಪರ ನಿಲ್ತಾರಾ?
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದ್ದು, ಈ ಮೂಲಕ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮೇ 14 ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೊಗನ್ ಮತ್ತು ಪ್ರತಿಸ್ಪರ್ಧಿ ಕೆಮಾಲ್ ಕಿಲಿಕ್ಡರೊಗ್ಲ ಗೆಲುವಿಗೆ ಅಗತ್ಯವಿರುವ ಬಹುಮತ ಪಡೆಯಲಿಲ್ಲ. ಈ ಹಿನ್ನೆಲೆಯಲ್ಲಿ 2 ನೇ ಸುತ್ತಿನ ಮತದಾನ ಭಾನುವಾರ ನಡೆದಿದೆ. ಇದರಲ್ಲಿ ಎರ್ಡೋಗನ್ ಅವರು ವಿರೋಧ ಪಕ್ಷದ ನಾಯಕ ಕೆಮಲ್ ಕಿಲಿಕ್ಡರೊಗ್ಲು ಅವರನ್ನು ಸೋಲಿಸಿದ್ದಾರೆ.
ಇದನ್ನೂ ಓದಿ : ಲಡಾಖ್ ಗಡಿಯಲ್ಲಿ ಚೀನಾ ತಂಟೆಗೆ ಭಾರತದ ಟಕ್ಕರ್ – ಚೆನ್ಮೋ ಸೆಕ್ಟರ್‌ಗೆ ಪ್ರವಾಸಿಗರ ಭೇಟಿಗೆ ಅನುಮತಿ
ಕಳೆದ 20 ವರ್ಷಗಳಿಂದ ಟರ್ಕಿಯನ್ನ ಆಳುತ್ತಿರುವ ಎರ್ಡೊಗಾನ್ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟರ್ಕಿ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೊಗಾನ್ ಗೆಲುವು ದಾಖಲಿಸಿದ್ದು ಮುಂದಿನ ಐದು ವರ್ಷಗಳ ಕಾಲ ಮತ್ತೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ. 69 ವರ್ಷದ ಎರ್ಡೊಗಾನ್ಗೆ ಈ ಬಾರಿಯ ಚುನಾವಣೆ ಭಾರಿ ಸವಾಲಿನದ್ದಾಗಿತ್ತು. ಹಳ್ಳ ಹಿಡಿದಿರುವ ಟರ್ಕಿ ಅರ್ಥವ್ಯವಸ್ಥೆ ಮತ್ತು ಭೂಕಂಪದ ಬಳಿಕ ಎರ್ಡಗಾನ್ಗೆ ಗೆಲುವು ಅಷ್ಟೊಂದು ಸುಲಭವಾಗಿರಲಿಲ್ಲ. ಜೊತೆಗೆ ಪ್ರತಿಪಕ್ಷ ಕೂಡ ಬಲಿಷ್ಠವಾಗಿತ್ತು. ಆದ್ರೂ ಸತತ ಐದನೇ ಬಾರಿಗೆ ಅಧ್ಯಕ್ಷ ಪಟ್ಟ ಏರುವಲ್ಲಿ ಎರ್ಡೊಗಾನ್ ಯಶಸ್ವಿಯಾಗಿದ್ದಾರೆ. ಆದ್ರೆ ಎರ್ಡೊಗಾನ್ ಅಧಿಕಾರವಧಿಯಲ್ಲಿ ಭಾರತ ಮತ್ತು ಟರ್ಕಿ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಇದೆ. ಯಾಕಂದ್ರೆ ಜಮ್ಮು-ಕಾಶ್ಮೀರದಲ್ಲಿ ಎರ್ಡೊಗಾನ್ ಪಾಕಿಸ್ತಾನದ ಪರ ನಿಲುವು ತಾಳಿದ್ದಾರೆ. ಮುಂದಿನ ದಿನಗಳಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರ್ಡೊಗಾನ್ ಕಾಶ್ಮೀರ ವಿಚಾರವಾಗಿ ಕ್ಯಾತೆ ತೆಗೆದ್ರೂ ಆಶ್ಚರ್ಯ ಇಲ್ಲ.
ಭೀಕರ ಭೂಕಂಪ, ಹೆಚ್ಚಿದ ಹಣ ದುಬ್ಬರದ ಮಧ್ಯೆಯೂ ಎರ್ಡೊಗನ್ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 20 ವರ್ಷಗಳಿಂದ ಈ ಸ್ಥಾನದ ಮೇಲಿದ್ದ ಅವರ ಹಿಡಿತ ಮೂರನೇ ದಶಕಕ್ಕೂ ಮುಂದುವರಿದಂತಿದೆ. 2017ರಲ್ಲಿ ಏಪ್ರಿಲ್ನಲ್ಲಿ ಜನಮತ ಸಂಗ್ರಹದ ಮೂಲಕ ಅಂಗೀಕರಿಸಲಾದ ನೂತನ ಸಂವಿಧಾನದ ಪ್ರಕಾರ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ.