1 ಲಕ್ಷ ಬೆಲೆಯ ಮೊಬೈಲ್ ಡ್ಯಾಂಗೆ ಬಿತ್ತು- 21 ಲಕ್ಷ ಲೀಟರ್ ನೀರು ಹೊರಬಿಟ್ಟು ಮೊಬೈಲ್ ಹುಡುಕಿಸಿದ ಅಧಿಕಾರಿ..!
ನಮ್ಮ ದೇಶದಲ್ಲಿ ಕೆಲವೊಮ್ಮೆ ಅಧಿಕಾರಿಗಳು ತೋರುವ ದರ್ಪ ಅಷ್ಟಿಷ್ಟಲ್ಲ. ಕೈಗೆ ಪವರ್ ಸಿಕ್ಕ ಕೂಡಲೇ ಕೆಲ ಅಧಿಕಾರಿಗಳಿಗೆ ಅಹಂಕಾರ ಅನ್ನೋದು ತಲೆಗೆ ಹತ್ತಿ ಬಿಡುತ್ತೆ. ಕೆಲ ಮಂದಿ ಸರ್ಕಾರಿ ಹುದ್ದೆಗೇರುತ್ತಲೇ ಸಮಾಜಸೇವೆ ಮಾಡೋಕೆ ಬಂದವರು ಅನ್ನೋದನ್ನು ಮರೆತು ನಾನು, ನನ್ನದು, ನನಗೋಸ್ಕರ ಎಂಬಂತೆ ಸ್ವಾರ್ಥಿಗಳಾಗಿಬಿಡ್ತಾರೆ. ಬೇರೆಯವರ ಕಷ್ಟಕ್ಕೆ ಸ್ಪಂದಿಸೋದಕ್ಕಿಂತ ಆಡಂಬರ ಮಾಡುತ್ತಾ, ತಮ್ಮ ಪವರ್ನ ತಾಕತ್ತು ಪ್ರದರ್ಶಿಸೋಕೆ ಮುಂದಾಗುತ್ತಾರೆ. ಇದೂ ಕೂಡಾ ಅಂಥದ್ದೇ ಅಧಿಕಾರಿಯೊಬ್ಬರ ಸ್ಟೋರಿ. ಹೆಸರು ರಾಜೇಶ್ ವಿಶ್ವಾಸ್. ಛತ್ತೀಸ್ಗಢದ ಫುಡ್ ಇನ್ಸ್ಪೆಕ್ಟರ್. ಕೋಯಲಿಬೆಡಾ ಎಂಬಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಅಧಿಕಾರಿ ಅಲ್ಲಿನ ಡ್ಯಾಮ್ ಒಂದಕ್ಕೆ ಭೇಟಿ ಕೊಟ್ಟಿದ್ದರು. ಡ್ಯಾಮ್ ಮೇಲೆ ತಿರುಗಾಡುತ್ತಿದ್ದಾಗ ಕೈಯಲ್ಲಿದ್ದ 1 ಲಕ್ಷ ರೂಪಾಯಿ ಬೆಲೆಯ ಮೊಬೈಲ್ ಅಚಾನಕ್ಕಾಗಿ ಡ್ಯಾಮ್ನೊಳಕ್ಕೆ ಬಿದ್ದಿದೆ.
ಇದನ್ನೂ ಓದಿ: ನಾಯಕರ ನಡುವೆ ‘ಗ್ಯಾರಂಟಿ’ ಗುದ್ದಾಟ – ಫ್ರೀ ಆಫರ್ ಪಡೆಯಲು ಯಾವೆಲ್ಲಾ ಷರತ್ತುಗಳು ಅನ್ವಯ?
ತನ್ನ ಬೆಲೆ ಬಾಳುವ ಮೊಬೈಲ್ ನೀರಿಗೆ ಬೀಳುತ್ತಲೇ ಅಧಿಕಾರಿ ರಾಜೇಶ್ ವಿಲವಿಲ ಒದ್ದಾಡಿದ್ದಾನೆ. ಅದೇನೇ ಆದರೂ ಸರಿ ಮೊಬೈಲ್ನ್ನ ಪತ್ತೆ ಹಚ್ಚಲೇಬೇಕು. ಡ್ಯಾಮ್ನೊಳಕ್ಕೆ ಬಿದ್ದ ಮೊಬೈಲ್ನ್ನ ಮೇಲೆತ್ತಲೇ ಬೇಕು ಅಂತಾ ರಾಜೇಶ್ ವಿಶ್ವಾಸ್ ಪಟ್ಟು ಹಿಡಿದಿದ್ದಾನೆ. ಸುಮಾರು 15 ಫೀಟ್ ಆಳದ ಡ್ಯಾಂ ಅದಾಗಿತ್ತು. ವಾಟರ್ಪ್ರೂಫ್ ಮೊಬೈಲ್ ಆಗಿರುವ ಹಿನ್ನೆಲೆಯಲ್ಲಿ ಅದಕ್ಕೆ ಏನೂ ಆಗಿರಲ್ಲ. ಹೇಗಾದರೂ ಸರಿ, ತನ್ನ ಮೊಬೈಲ್ ಮಾತ್ರ ಕೈಗೆ ಸಿಗಲೇಬೇಕು ಅಂತಾ ಹಠ ಹಿಡಿದಿದ್ದಾನೆ. ಇದಕ್ಕಾಗಿ ಅಧಿಕಾರಿ ರಾಜೇಶ್ ನೀರಾವರಿ ಇಲಾಖೆಯನ್ನ ಸಂಪರ್ಕಿಸಿ, ಮೊಬೈಲ್ ಹೊರಗೆ ಹೇಗೆ ತೆಗೆಯಬಹುದು ಎಂಬ ಬಗ್ಗೆ ಆಫೀಸರ್ಗಳ ಜೊತೆ ಚರ್ಚೆ ನಡೆಸಿದ್ದಾನೆ. ಆಗ ಪಂಪ್ ಮೂಲಕ ನೀರನ್ನ ಹೊರಕ್ಕೆ ಹಾಕಬೇಕಷ್ಟೆ ಎಂಬ ಸಲಹೆ ನೀರಾವರಿ ಇಲಾಖೆ ಅಧಿಕಾರಿಗಳ ಕಡೆಯಿಂದ ಬಂದಿದೆ. ಅಷ್ಟೇ, ಕೆಲ ಹೊತ್ತಲ್ಲೇ ಮೊಬೈಲ್ ಬಿದ್ದಿದ್ದ ಡ್ಯಾಂಗೆ 30 ಹಾರ್ಸ್ ಪವರ್ನ ಪಂಪ್ನ್ನ ಅಳವಡಿಸಲಾಗುತ್ತೆ. ಸಂಗ್ರಹಿಸಲಾಗಿದ್ದ ಡ್ಯಾಂ ನೀರನ್ನ ಪಂಪ್ ಮೂಲಕ ಹೊರಕ್ಕೆ ಬಿಡಲಾಗುತ್ತೆ.
ಒಂದೇ ದಿನದಲ್ಲಿ 21 ಲಕ್ಷ ಲೀಟರ್ ನೀರು ಹೊರಕ್ಕೆ!
ಫುಡ್ ಇನ್ಸ್ಪೆಕ್ಟರ್ನ ಮೊಬೈಲ್ ಪತ್ತೆಗಾಗಿ ಅದೆಂಥಾ ಅವಾಂತರ ಮಾಡಿದ್ದಾರೆ ನೋಡಿ. ಒಂದೇ ದಿನದಲ್ಲಿ ಡ್ಯಾಂನಿಂದ ಬರೋಬ್ಬರಿ 21 ಲಕ್ಷ ಲೀಟರ್ ನೀರನ್ನ ಹೊರಕ್ಕೆ ಬಿಡಲಾಗಿದೆ. ಹಾಗಂತಾ ಒಂದೇ ದಿನಕ್ಕೆ ಮೊಬೈಲ್ ಪತ್ತೆ ಕಾರ್ಯಾಚರಣೆ ಅಂತ್ಯವಾಗಿಲ್ಲ. ಹಗಲು ರಾತ್ರಿ ಮೂರು ದಿನಗಳ ಕಾಲ ನಿರಂತರವಾಗಿ ಡ್ಯಾಂನಿಂದ ನೀರನ್ನ ಹೊರಕ್ಕೆ ತೆಗೆಯಲಾಗಿದೆ. ಮೂರು ದಿನಗಳಲ್ಲಿ ಅನಾಮತ್ತು 41,104 ಕ್ಯೂಬಿಕ್ ಮೀಟರ್ನಷ್ಟು ನೀರನ್ನ ಹೊರಕ್ಕೆತ್ತಲಾಯ್ತು. ಕಾರಣ ಏನು.. ಅಧಿಕಾರಿಯ ಮೊಬೈಲ್ನ್ನ ಪತ್ತೆ ಹಚ್ಚೋಕೆ.
ಅಸಲಿಗೆ ಕೋಯಲಿಬೆಡಾ ಗ್ರಾಮದ ಜನತೆ ಸಂಪೂರ್ಣವಾಗಿ ಈ ಡ್ಯಾಂ ನೀರನ್ನೇ ಅವಲಂಬಿಸಿದ್ರು. ಅಗತ್ಯ ಬಳಕೆಗೆ, ಕೃಷಿಗೆ ಹೀಗೆ ಎಲ್ಲದಕ್ಕೂ ಕೂಡ ಗ್ರಾಮಸ್ಥರಿಗೆ ಡ್ಯಾಂ ನೀರೇ ಆಸರೆಯಾಗಿತ್ತು. ಸುಮಾರು 1,500 ಎಕರೆ ಕೃಷಿ ಭೂಮಿಗೆ ಡ್ಯಾಂ ನೀರನ್ನ ಹಾಯಿಸಲಾಗುತ್ತಿತ್ತು. ಆದ್ರೆ, ಅಧಿಕಾರಿಯ ಒಂದು ಮೊಬೈಲ್ಗೋಸ್ಕರ ಡ್ಯಾಂ ನೀರನ್ನೇ ಖಾಲಿ ಮಾಡುವ ಕಾರ್ಯಾಚರಣೆ ಸಾಗಿತ್ತು. ವಿಚಾರ ತಿಳಿದ ನೀರಾವರಿ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದು ಪಂಪ್ ನಿಲ್ಲಿಸುವಂತೆ ಸೂಚಿಸಿದ್ರು. ನೀರು ಹೊರಕ್ಕೆ ತೆಗೆಯೋ ಕಾರ್ಯವನ್ನ ಸ್ಥಗಿತಗೊಳಿಸಲಾಯ್ತು. ಆದರೆ, ಮೊಬೈಲ್ ಬೇಕೇ ಬೇಕು ಅಂತಾ ಚಿಕ್ಕ ಮಕ್ಕಳಂತೆ ಅಧಿಕಾರಿ ರಾಜೇಶ್ ಹಠ ಹಿಡಿದ ಕಾರಣ ಒಂದಷ್ಟು ಈಜುಪಟುಗಳು ಡ್ಯಾಮ್ನೊಳಕ್ಕೆ ಇಳಿದು ಮೊಬೈಲ್ ಗೋಸ್ಕರ ಹುಡುಕಾಡಿದರು. ಈ ವೇಳೆ ಅಧಿಕಾರಿ ರಾಜೇಶ್ನ ಒಂದು ಲಕ್ಷ ಬೆಲೆಯ ಮೊಬೈಲ್ ಪತ್ತೆಯಾಗಿದೆ. ಮೂರು ದಿನಗಳ ಕಾರ್ಯಾಚರಣೆ ಬಳಿಕ ಕೊನೆಗೂ ಮೊಬೈಲ್ ಸಿಕ್ಕಿತ್ತು. ಆದರೇನು ಮಾಡೋದು ಆತನ ದುರಾದೃಷ್ಟಕ್ಕೋ, ಅಹಂಕಾರಕ್ಕೋ ಇಷ್ಟೆಲ್ಲಾ ಸರ್ಕಸ್ ಮಾಡಿ ಡ್ಯಾಂನಿಂದ ಹೊರಕ್ಕೆ ತೆಗೆದರೂ ಆ ಮೊಬೈಲ್ ಮಾತ್ರ ಆನ್ ಆಗಲೇ ಇಲ್ಲ. ವಾಟರ್ ಪ್ರೂಫ್ ಮೊಬೈಲ್ ಆಗಿದ್ದರೂ, ಮೂರು ದಿನಗಳ ಕಾಲ ನೀರಲ್ಲಿ ಮುಳುಗಿದ್ರಿಂದ ಮೊಬೈಲ್ ಸಂಪೂರ್ಣವಾಗಿ ಕೆಟ್ಟು ಹೋಗಿತ್ತು. ಅಷ್ಟೊತ್ತಿಗಾಗಲೇ ಡ್ಯಾಂನಲ್ಲಿ 15 ಫೀಟ್ ನೀರಿನ ಪೈಕಿ 10 ಫೀಟ್ನಷ್ಟು ನೀರು ಖಾಲಿಯಾಗಿತ್ತು. ನೀರೂ ಹೋಯ್ತು.. ಇತ್ತ ಅಧಿಕಾರಿಯ ಮೊಬೈಲ್ ಕೂಡ ಕೆಟ್ಟೋಯ್ತು. ಇನ್ನು ಗ್ರಾಮದ ರೈತರು ಹೊಲಕ್ಕೆ ನೀರಿಲ್ಲದೆ ಪರದಾಡುವಂತಾಯ್ತು. ಮೊದಲೇ ಛತ್ತೀಸ್ಗಢ ಬಿಸಿಲಿನ ಬೇಗೆಗೆ ಕಂಗಾಲಾಗಿದೆ. ಕೆರೆ, ಬಾವಿ ಎಲ್ಲವೂ ಬತ್ತಿ ಹೋಗುತ್ತಿದೆ. ಜನರು ನೀರಿಗೆ ಪರದಾಡುವಂತಾಗಿದೆ. ಆದ್ರೆ, ಈ ತಲೆಕೆಟ್ಟ ಅಧಿಕಾರಿ ಮಾತ್ರ ಜನರಿಗೆ ಕುಡಿಯೋಕೆ ನೀರು ಇಲ್ಲದಿದ್ರೂ ಪರ್ವಾಗಿಲ್ಲ. ನನ್ನ ಮೊಬೈಲ್ ಸಿಕ್ರೆ ಸಾಕು ಎಂಬಂತೆ ವರ್ತಿಸಿದ್ದಾನೆ. ಇಷ್ಟೆಲ್ಲಾ ಆದ ಮೇಲೆ ಅಧಿಕಾರಿ ರಾಜೇಶ್ ವಿಶ್ವಾಸ್ ತನ್ನ ನಡೆಯನ್ನ ಸಮರ್ಥಿಸಿಕೊಂಡಿದ್ದಾನೆ. ಡ್ಯಾಂನ ನೀರು ಕುಡಿಯೋಕೆ ಆಗಲಿ, ಕೃಷಿಗಾಗಲಿ ಯೋಗ್ಯವಾಗಿರಲಿಲ್ಲ. ಹೀಗಾಗಿ ನೀರನ್ನ ಖಾಲಿ ಮಾಡೋಕೆ ಹೇಳಿದೆ ಅಂತಾ ಸಬೂಬು ನೀಡಿದ್ದಾನೆ.
ಅಹಂಕಾರಿ ಅಧಿಕಾರಿ ಸಸ್ಪೆಂಡ್!
ಇದೀಗ ಈ ಅಹಂಕಾರಿಯನ್ನ ಜಿಲ್ಲಾಧಿಕಾರಿಗಳು ಕೆಲಸದಿಂದಲೇ ಅಮಾನತುಗೊಳಿಸಿದ್ದಾರೆ. ಮತ್ತೊಂದೆಡೆ ಛತ್ತೀಸ್ಗಢ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೂಡ ಮುಗಿಬಿದ್ದಿದ್ದಾರೆ. ಭೂಪೇಶ್ ಬಘೇಲ್ ಆಡಳಿತದಲ್ಲಿ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.