12,000ಕ್ಕೂ ಅಧಿಕ ಪ್ರಾಕೃತಿಕ ವಿಕೋಪ! – ಪ್ರಕೃತಿ ಮಾತೆಯ ಮುನಿಸಿಗೆ ಬಲಿಯಾದವರು ಎಷ್ಟು ಮಂದಿ ಗೊತ್ತಾ?
ಮನುಷ್ಯ ಆಧುನಿಕತೆಗೆ ಮರುಳಾಗಿ ದಿನೇ ದಿನೇ ಪರಿಸರ ನಾಶ ಮಾಡುತ್ತಿದ್ದಾನೆ. ಇದರಿಂದಾಗಿ ಅಕಾಲಿಕ ಮಳೆ ಒಂದೆಡೆಯಾದರೆ, ಮತ್ತೊಂದು ಕಡೆ ತಾಪಮಾನ ಏರಿಕೆಯಾಗುತ್ತಿದೆ. ಇದೀಗ ವಿಶ್ವ ಹವಾಮಾನ ಸಂಸ್ಥೆ ಕಳೆದ 50 ವರ್ಷಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಯ ಬಗ್ಗೆ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಮುಂದಿನ 5 ವರ್ಷಗಳಲ್ಲಿ ವಿಶ್ವದೆಲ್ಲೆಡೆ ಅಧಿಕ ತಾಪಮಾನ! – ವಿಶ್ವ ಸಂಸ್ಥೆ ಎಚ್ಚರಿಕೆ ಏನು?
ವಿಶ್ವ ಹವಾಮಾನ ಸಂಸ್ಥೆ ವರದಿಯ ಪ್ರಕಾರ, ಕಳೆದ 50 ವರ್ಷಗಳಲ್ಲಿ ಚಂಡಮಾರುತ, ಭೂಕಂಪ, ಪ್ರವಾಹದಂತಹ ವಿಕೋಪದಿಂದಾಗಿ 12,000ಕ್ಕೂ ಅಧಿಕ ಪ್ರಾಕೃತಿಕ ವಿಕೋಪಗಳ ಘಟನೆಗಳು ವರದಿಯಾಗಿವೆ. ಈ ಅವಘಡದಲ್ಲಿ ಬರೋಬ್ಬರಿ 2 ದಶಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 4.3 ಲಕ್ಷ ಕೋಟಿ ಡಾಲರ್ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ವರದಿಯಾಗಿದೆ.
ಇಷ್ಟೊಂದು ಪ್ರಾಕೃತಿ ವಿಕೋಪ ಸಂಭವಿಸಲು ಏನು ಕಾರಣ ಎಂಬುವುದನ್ನು ಕೂಡ ವಿಶ್ವ ಹವಾಮಾನ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. ಪ್ರಕೃತಿ ಮೇಲಿನ ಮನುಷ್ಯನ ಅವಲಂಬನೆ ಹೆಚ್ಚುತ್ತಿದೆ. ಕಾಡಿನ ನಾಶ ವಿಪರೀತವಾಗಿದೆ. ಇದರ ಪರಿಣಾಮ ಭೂಮಿಯ ತಾಪಮಾನ ವರ್ಷದಿಂದ ವರ್ಷಕ್ಕೆ ಏರುತ್ತಲಿದ್ದು, ಶಾಖದ ಅಲೆ, ಚಂಡಮಾರುತ, ಬರ ಪರಿಸ್ಥಿತಿ ಎದುರಾಗುತ್ತಿದೆ ಎಂದು ತಿಳಿಸಿದೆ.
ಹವಾಮಾನ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡುತ್ತಿರುವ ಪರಿಣಾಮವಾಗಿ ಸಾವು-ನೋವುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಆರ್ಥಿಕ ನಷ್ಟಗಳು ವಿಪರೀತವಾಗಿದೆ. ವಿಪರ್ಯಾಸವೆಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಹೆಚ್ಚಿನ ಸಾವು-ನೋವು ಸಂಭವಿಸಿರುವುದು ವರದಿಯಾಗಿದೆ. ಇನ್ನು 1970ರಿಂದ 2021ರವರೆಗೆ ಅಮೆರಿಕ ಒಂದರಲ್ಲಿಯೇ 1.7 ಲಕ್ಷ ಕೋಟಿ ಡಾಲರ್ ಆರ್ಥಿಕ ನಷ್ಟ ವರದಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.