16 ವರ್ಷಗಳ ನಂತರ ತನ್ನದೇ ಹೃದಯದ ಭೇಟಿ – ಮ್ಯೂಸಿಯಂನಲ್ಲಿ ಕಂಡುಬಂದಿದ್ದು ‘ಹೃದಯಸ್ಪರ್ಶಿ’ ಸನ್ನಿವೇಶ..!
22 ವರ್ಷಗಳ ಕಾಲ ಆಕೆಯನ್ನು ಜೀವಂತವಾಗಿರಿಸಿದ್ದ ಹೃದಯವನ್ನು ಸ್ವತಃ ಆಕೆಯೇ ಮ್ಯೂಸಿಯಂನಲ್ಲಿ ನೋಡಿರುವ ರಿಯಲ್ ಸ್ಟೋರಿ ಇದು. ಅಂದಹಾಗೆ ಆಕೆ ತನ್ನ ಹೃದಯವನ್ನು 16 ವರ್ಷಗಳ ನಂತರ ಭೇಟಿಯಾಗಿದ್ದಾಳೆ. ಇದು ಬರೀ ಅಚ್ಚರಿ ವಿಚಾರವಲ್ಲ. ನಂಬಲು ಅಸಾಧ್ಯವಾದರೂ ನಂಬಲೇಬೇಕಾದ ಸತ್ಯ. ಇದೊಂಥರಾ ಮೆಡಿಕಲ್ ಮಿರಾಕಲ್ ಸ್ಟೋರಿ. 16 ವರ್ಷಗಳ ಹಿಂದೆ ಅಂದರೆ, 2007 ರಲ್ಲಿ ಇಂಗ್ಲೆಂಡ್ ನ 22 ವರುಷದ ಜೆನ್ನೀಫರ್ ಸುಟ್ಟನ್ ಅವರಿಗೆ ಹೃದಯದ ಕಸಿ ಮಾಡುವ ಸಂದರ್ಭದಲ್ಲಿ ಆಕೆಯ ಹೃದಯವನ್ನ ಹೊರ ತೆಗೆಯಲಾಗಿತ್ತು. ಆಕೆಯ ಹೃದಯವನ್ನ 16 ವರ್ಷಗಳ ಕಾಲ ಸಂರಕ್ಷಿಸಿಡಲಾಗಿತ್ತು. ಈ ಹೃದಯವನ್ನು ಇತ್ತೀಚಿಗೆ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ತನ್ನ ಹೃದಯವನ್ನು ನೋಡಲು ಜೆನ್ನೀಫರ್ ಕೂಡಾ ಬಂದಿದ್ದಳು.
ಇದನ್ನೂ ಓದಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಸ್ಲಮ್‌ನ ರಾಜಕುಮಾರಿ – 14 ವರ್ಷದ ಬಾಲೆಗೆ ಹಾಲಿವುಡ್‌ನಿಂದಲೂ ಆಫರ್..!
ಲಂಡನ್‌ನ ಹಂಟೇರಿಯನ್ ಮ್ಯೂಸಿಯಂನಲ್ಲಿ ಜೆನ್ನೀಫರ್ ತನ್ನ ಹೃದಯವನ್ನು ವೀಕ್ಷಿಸಿದ್ದಾಳೆ. ತನ್ನನ್ನು ಜೀವಂತವಿಟ್ಟಿರುವ ಆದರೂ ತನ್ನೊಳಗಿಲ್ಲದೇ ಹೊರಗಿದ್ದ ಹೃದಯವನ್ನು ನೋಡಿದ ನಂತರ ಜೆನ್ನೀಫರ್ ತನಗಾದ ಅನುಭವವನ್ನು ಹಂಚಿಕೊಂಡಿದ್ದಾಳೆ. ಹೃದಯಯವನ್ನ ವೀಕ್ಷಿಸಿದ ಮೊದಲ ಕ್ಷಣ ವಿಚಿತ್ರ ಭಾವನೆ ಉಂಟಾಗಿತ್ತು. ಆದರೆ ಇದು ನನ್ನ ಒಡನಾಡಿಯಂತೆ. ನನ್ನನ್ನು 22 ವರ್ಷ ಜೀವಂತವಾಗಿರಿಸಿದ್ದ ಹೃದಯದ ಬಗ್ಗೆ ಹೆಮ್ಮೆ ಇದೆ. ಜೀವನದ ಉದ್ದಕ್ಕೂ ಅದೆಷ್ಟೂ ಸಂರಕ್ಷಿಸಲ್ಪಟ್ಟ ವಸ್ತುಗಳನ್ನ ನೋಡಿದ್ದೇನೆ. ಆದರೆ ಇದು ನಿಜವಾಗಿ ನನ್ನದು ಎಂಬ ಸಂಗತಿಯು ತುಂಬಾ ವಿಚಿತ್ರವಾಗಿದೆ ಅನ್ನೋದು ಜೆನ್ನೀಫರ್ ಮನದಾಳದ ಮಾತು. ಆಕೆಯ ಹೃದಯ ಪ್ರದರ್ಶನ, ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಸಹಾಯವಾಗಲಿದೆ ಅನ್ನೋದು ಜೆನ್ನೀಫರ್ ಆಶಯ.
ಜೆನ್ನೀಫರ್ 22 ನೇ ವರ್ಷ ವಯಸ್ಸಿನಲ್ಲಿ ಇದ್ದಾಗ ಹೃದಯ ಸಂಬಂಧಿತ ಸಮಸ್ಯೆಯಿರುವುದು ಪತ್ತೆಯಾಗಿತ್ತು. ಈ ಸ್ಥಿತಿಯು ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುವ ಹೃದಯದ ಸಾಮರ್ಥ್ಯವನ್ನು ಕುಂಠಿತಗೊಳಿಸಿತು. ಕಸಿ ಮಾಡುವಿಕೆಯ ಅಗತ್ಯತೆಯ ಬಗ್ಗೆ ಆಕೆಗೆ ತಿಳಿಸಿದ ನಂತರ, ಜೂನ್ 2007 ರಲ್ಲಿ, ಅವರು ಹೊಂದಾಣಿಕೆಯ ದಾನಿಯನ್ನು ಪಡೆದರು ಮತ್ತು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆಯ ಹದಿನಾರು ವರ್ಷಗಳ ನಂತರ, 38 ವರ್ಷದ ಜೆನ್ನಿಫರ್ ತನ್ನ ಜೀವನವನ್ನು ಅತ್ಯಂತ ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಂಡಿದ್ದಾಳೆ. ಜೀವನವನ್ನ ಪೂರ್ಣವಾಗಿ ಬದುಕಬೇಕು ಎಂದು ಬಯಸುತ್ತಾಳೆ. ಪ್ರದರ್ಶನಕ್ಕಾಗಿ ತನ್ನ ಹೃದಯವನ್ನು ಇರಿಸಿಕೊಳ್ಳಲು ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಅನುಮತಿ ಕೇಳಿದಾಗ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರದರ್ಶನವು ಸಹಕಾರಿಯಾಗಬಹುದು ಎನ್ನುವ ಉದ್ದೇಶಕ್ಕೆ ಆಕೆ ಇದಕ್ಕೆ ಒಪ್ಪಿಗೆ ನೀಡಿದ್ದಳು.