ಸಂಸತ್ ಭವನದ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಕಿತ್ತಾಟ – ಜೋರಾಗಿ ಸಾಗುತ್ತಿದೆ ‘ರಾಜದಂಡ’ ಸಮರ
ನೂತನ ಸಂಸತ್ ಭವನದ ಉದ್ಘಾಟನೆ ವಿಚಾರದಲ್ಲಿ ರಾಜಕೀಯ ಕಿತ್ತಾಟ ಒಂದೆಡೆಯಾದರೆ, ಈ ಮಧ್ಯೆ, ಸಂಸತ್ನಲ್ಲಿ ಸ್ಥಾಪನೆಯಾಗಲಿರುವ ರಾಜದಂಡದ ಬಗ್ಗೆಯೂ ಸಮರ ಶುರುವಾಗಿದೆ. ಮೇ 28ರಂದು ಪ್ರಧಾನಿ ಮೋದಿ ಸಂಸತ್ನಲ್ಲಿ ಐತಿಹಾಸಿಕ ರಾಜದಂಡವನ್ನ ಸ್ಥಾಪನೆ ಮಾಡಲಿದ್ದಾರೆ. ಆದ್ರೀಗ ಈ ರಾಜದಂಡದ ಇತಿಹಾಸಕ್ಕೆ ಸಂಬಂಧಿಸಿ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ.
ಇದನ್ನೂ ಓದಿ: ನೂತನ ಸಂಸತ್ ಭವನದ ಉದ್ಘಾಟನೆಗೆ ದಿನಗಣನೆ – ಸಂಸತ್ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಲು ವಿಪಕ್ಷಗಳ ಚಿಂತನೆ
1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವ ವೇಳೆ ಅಧಿಕಾರ ಹಸ್ತಾಂತರದ ಸಂಕೇತವಾಗಿ ಲಾರ್ಡ್ ಮೌಂಟ್ ಬ್ಯಾಟನ್ ರಾಜದಂಡವನ್ನ ಅರ್ಚಕರ ಮೂಲಕವಾಗಿ ಮಾಜಿ ಪ್ರಧಾನಿ ನೆಹರೂ ಅವರಿಗೆ ನೀಡಿದ್ದರು ಅಂತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದರು. ಆದ್ರೆ ಈ ಬಗ್ಗೆ ಚಕಾರ ಎತ್ತಿರುವ ಕಾಂಗ್ರೆಸ್, ರಾಜದಂಡ ಅಧಿಕಾರ ಹಸ್ತಾಂತರದ ಸಂಕೇತ ಅನ್ನೋದಕ್ಕೆ ಯಾವುದೇ ದಾಖಲೆಗಳಿಲ್ಲ ಅಂತಾ ಹೇಳಿದೆ. ಹಿರಿಯ ನಾಯಕ ಜೈರಾಮ್ ರಮೇಶ್ ರಾಜದಂಡದ ಬಗ್ಗೆ ಮಾತನಾಡಿದ್ದು, ಪ್ರಧಾನಿ ಮತ್ತು ಅವರ ಜೊತೆ ಡ್ರಮ್ ಬಾರಿಸುವವರು ತಮಿಳುನಾಡಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜದಂಡವನ್ನ ಬಳಸುತ್ತಿದ್ದಾರೆ. ರಾಜದಂಡದ ಸುತ್ತ ಹೆಣೆದಿರೋದೆಲ್ಲ ಕಟ್ಟು ಕಥೆ. ರಾಜದಂಡ ಅಧಿಕಾರ ಹಸ್ತಾಂತರದ ಸಂಕೇತ ಅನ್ನೋದು ದೊಡ್ಡ ಬೋಗಸ್ ಅಂತಾ ಟೀಕಾಪ್ರಹಾರ ಮಾಡಿದ್ದಾರೆ. ಇದ್ರಿಂದ ಬಿಜೆಪಿ ನಾಯಕರು ರೊಚ್ಚಿಗೆದ್ದಿದ್ದು, ಭಾರತದ ಪದ್ಧತಿ ಮತ್ತು ಸಂಸ್ಕೃತಿಯನ್ನ ಕಾಂಗ್ರೆಸ್ ಇಷ್ಟೊಂದು ದ್ವೇಷಿಸೋದು ಯಾಕೆ? ಪಂಡಿತ್ ನೆಹರೂ ಅವರಿಗೆ ನೀಡಲಾಗಿದ್ದ ಐತಿಹಾಸಿಕ ರಾಜದಂಡವನ್ನ ವಾಕಿಂಗ್ ಸ್ಟಿಕ್ ಅಂತಾ ಪರಿಗಣಿಸಿ ಮ್ಯೂಸಿಯಂನಲ್ಲಿ ಇಡಲಾಗಿದ್ದು. ಇದು ದುರಂತವಲ್ಲವೇ ಅಂತಾ ಅಮಿತ್ ಶಾ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ತಮಿಳುನಾಡಿನ ಅಧೀನಮ್ ಮಠದ ಹಿರಿಯರೇ ಈ ರಾಜದಂಡದ ಮಹತ್ವದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಧೀನಮ್ ನ ಇತಿಹಾಸವನ್ನೇ ಕಾಂಗ್ರೆಸ್ ಬೋಗಸ್ ಅಂತಿದೆ. ಕಾಂಗ್ರೆಸಿಗರು ಮೊದಲು ತಮ್ಮನ್ನ ತಾವು ಅವಲೋಕನ ಮಾಡಿಕೊಳ್ಳಲಿ ಅಂತಾ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಈ ನಡುವೆ, ರಾಜದಂಡ ಅಧಿಕಾರ ಹಸ್ತಾಂತರದ ಸಂಕೇತ ಅನ್ನುವುದಾದರೆ, ಪ್ರಧಾನಿ ಮೋದಿ ತಮ್ಮ ಅಧಿಕಾರ ಹಸ್ತಾಂತರಕ್ಕೆ ಸಿದ್ಧವಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೋಲನುಭವಿಸುತ್ತೇವೆ ಅನ್ನೋದನ್ನ ಒಪ್ಪಿಕೊಂಡಂತಾಗಿದೆ ಅಂತಾ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಮತ್ತೊಂದೆಡೆ ಸಂಸತ್ ಭವನವನ್ನ ಪ್ರಧಾನಿ ಬದಲಾಗಿ ರಾಷ್ಟ್ರಪತಿಗಳು ಉದ್ಘಾಟಿಸಬೇಕು ಅಂತಾ ಮನವಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಈ ನಡುವೆ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನ ಬಹಿಷ್ಕರಿಸುತ್ತಿರುವ ಕಾಂಗ್ರೆಸ್ ನಡೆಯನ್ನ ಜೆಡಿಎಸ್ನ ಕುಮಾರಸ್ವಾಮಿ ಟೀಕಿಸಿದ್ದಾರೆ. ಯಾವುದೇ ಭವನವನ್ನ ಉದ್ಘಾಟನೆ ಮಾಡಿದಾಗ ರಾಷ್ಟ್ರಪತಿ, ರಾಜ್ಯಪಾಲರನ್ನ ಕರೆದ ಉದಾಹರಣೆ ಇಲ್ಲ. ಛತ್ತೀಸ್ಗಢ ವಿಧಾನಸಭೆಗೆ ಅಡಿಗಲ್ಲಿಗೆ ಸೋನಿಯಾ, ರಾಹುಲ್ ಗಾಂಧಿಯನ್ನ ಆಹ್ವಾನಿಸಿದರು. ರಾಜ್ಯಪಾಲರನ್ನ ಆಹ್ವಾನಿಸಿರಲಿಲ್ಲ ಅಂತಾ ಹೆಚ್ಡಿಕೆ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದಕ್ಕೆ ರಾಷ್ಟ್ರಪತಿ ಚುನಾವಣೆ ವೇಳೆ ವೋಟಿಂಗ್ನ ಬಾಯ್ಕಾಟ್ ಮಾಡಿದ್ದ ಪಕ್ಷಕ್ಕೆ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ ಅಂತಾ ಡಿಕೆ ಶಿವಕುಮಾರ್ ಟಕ್ಕರ್ ಕೊಟ್ಟಿದ್ದಾರೆ.