81 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ – 5 ವರ್ಷದ ಬಳಿಕ ಶತಮಾನದ ಹಿಂದಿನ ದೇವಾಲಯ ಗೋಚರ
ಮಂಡ್ಯ: ರಾಜ್ಯದಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆ ಕೈಕೊಟ್ಟಿದೆ. ಇದರಿಂದಾಗಿ ರಾಜ್ಯದ ಹಲವು ಜಲಾಶಯಗಳಲ್ಲಿ ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿದೆ. ಇದೀಗ ಕೆಆರ್‌ಎಸ್ ಆಣೆಕಟ್ಟಿನಲ್ಲಿ ನೀರು ದಾಖಲೆ ಪ್ರಮಾಣದಲ್ಲಿ ಕುಸಿದಿದ್ದು, ಮುಳುಗಡೆಯಾಗಿದ್ದ ಶತಮಾನದ ಹಿಂದಿನ ನಾರಾಯಣಸ್ವಾಮಿ ದೇವಾಲಯ ಐದು ವರ್ಷಗಳ ಬಳಿಕ ಗೋಚರವಾಗುತ್ತಿದೆ.
ಇದನ್ನೂ ಓದಿ: ವಾಲುತ್ತಿದೆ ಜಗತ್ತಿನ ಅತೀ ಎತ್ತರದ ಶಿವನ ದೇವಾಲಯ – ದೇಗುಲ ಹಾನಿಗೆ ಕಾರಣವೇನು ಗೊತ್ತಾ?
ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮುಂಗಾರು ಮಳೆ ಆರಂಭವಾಗಿಲ್ಲ. ಈ ಹಿನ್ನೆಲೆ ಕೆಆರ್‌ಎಸ್ ಡ್ಯಾಂನಲ್ಲಿ ಕೇವಲ 81 ಅಡಿ ಮಾತ್ರ ನೀರು ಸಂಗ್ರಹವಾಗಿದೆ. ಈ ಊರಿನಲ್ಲಿ ಒಂದೆಡೆ ನೀರಿನ ಕೊರತೆ ಎದುರಾಗುವ ಆತಂಕವಿದ್ದರೆ, ಮತ್ತೊಂದೆಡೆ ಐದು ವರ್ಷಗಳ ಬಳಿಕ ಅಣೆಕಟ್ಟೆಯಲ್ಲಿ ಮುಳುಡೆಯಾದ ವೈಶಿಷ್ಟ್ಯಗಳು ಬೆಳಿಕಿಗೆ ಬರುತ್ತಿವೆ. ಆದರೆ ಕೆಆರ್ ಎಸ್ ಡ್ಯಾಂನಲ್ಲಿ 110 ಅಡಿಗೂ ಹೆಚ್ಚು ನೀರು ಸಂಗ್ರಹವಾದರೆ ದೇವಾಲಯ ಸಂಪೂರ್ಣ ಮುಳುಗಡೆಯಾಗುತ್ತದೆ. ಈಗ ಡ್ಯಾಂನಲ್ಲಿ 81 ಅಡಿ ನೀರು ಸಂಗ್ರಹವಾಗಿದೆ. ಇದರಿಂದಾಗಿ ದೇವಾಲಯ ಹಾಗೂ ಶತಮಾನದ ವೀರಗಲ್ಲುಗಳು ಕಾಣಲು ಸಿಗುತ್ತಿವೆ.
ಕೆಆರ್‌ಎಸ್ ಹಿನ್ನೀರಿನ ಬೋರೆ ಆನಂದೂರು ಗ್ರಾಮದ ಬಳಿಯ ಹಿನ್ನೀರಿನಲ್ಲಿ ಈ ಪುರಾತನ ಕಾಲದ ದೇವಸ್ಥಾನವಿದೆ. ಡ್ಯಾಂ ನಿರ್ಮಾಣ ಆಗುವುದಕ್ಕೂ ಮುನ್ನ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರಿಂದ ಪೂಜೆ ಮಾಡಲಾಗುತ್ತಿತ್ತು. ಡ್ಯಾಂ ನಿರ್ಮಾಣದ ಬಳಿಕ ದೇವಾಲಯ ಹಾಗೂ ಹಲವು ಹಳ್ಳಿಗಳು ನೀರಿನಲ್ಲಿ ಮುಳುಗಡೆಯಾದವು. ಈಗ ಮೂಲ ವಿಗ್ರಹವನ್ನು ಮಜ್ಜಿಗೆಪುರ ಗ್ರಾಮದ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.