ಕಾಂಗ್ರೆಸ್‌ ಗ್ಯಾರಂಟಿ ಎಫೆಕ್ಟ್‌ – 6 ದಿನಗಳಲ್ಲಿ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು ಎಷ್ಟು?

ಕಾಂಗ್ರೆಸ್‌ ಗ್ಯಾರಂಟಿ ಎಫೆಕ್ಟ್‌ – 6 ದಿನಗಳಲ್ಲಿ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು ಎಷ್ಟು?

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳ ಲಾಭ ಪಡೆಯಲು ಜನ ಉತ್ಸುಕರಾಗಿದ್ದಾರೆ. ಇದೀಗ ಬಿಪಿಎಲ್‌ ಕಾರ್ಡ್‌ ಗೆ ಡಿಮ್ಯಾಂಡ್‌ ಹೆಚ್ಚಾಗಿದ್ದು, ಕೇವಲ 6 ದಿನಗಳಲ್ಲಿ ಬರೋಬ್ಬರಿ 78 ಸಾವಿರ ಅರ್ಜಿ ಸಲ್ಲಿಕೆಯಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ ʼಗ್ಯಾರಂಟಿʼ ಕುತಂತ್ರ – ಹೇಗಿದೆ ಕುಮಾರಸ್ವಾಮಿ ಒತ್ತಡ ತಂತ್ರ?

ಜೂನ್‌ 1 ರಿಂದ ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರಂಟಿಗಳು ಜಾರಿಯಾಗುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಹೀಗಾಗಿ ರಾಜ್ಯದ ಜನತೆ ಬಿಪಿಎಲ್‌ ಕಾರ್ಡ್‌ ಮಾಡಿಸಲು ಸೈಬರ್‌ ಸೆಂಟರ್‌ ಗಳಿಗೆ ಮುಗಿಬೀಳುತ್ತಿದ್ದಾರೆ. ಆರು ತಿಂಗಳಲ್ಲಿ 2 ಲಕ್ಷದ 88 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಕೇವಲ ಒಂದು ವಾರದಲ್ಲಿ ಅರ್ಜಿ ಸಲ್ಲಿಕೆ ದಿಢೀರ್ ಏರಿಕೆಯಾಗಿದೆ. ಆದರೆ ಬಿಪಿಎಲ್ ಕಾರ್ಡ್ ಮಿತಿಯನ್ನು ಕರ್ನಾಟಕ ದಾಟಿದೆ. ಕೇಂದ್ರ ಸರ್ಕಾರದ ಸಬ್ಸಿಡಿ ಪಡೆಯಲು ಈ ಮಿತಿ ಬಹಳ ಮುಖ್ಯವಾಗಿದೆ.

ಈ ಕುರಿತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಜ್ಞಾನೇಂದ್ರ ಮಾತನಾಡಿದ್ದು,  ರಾಜ್ಯದಲ್ಲಿ 4.01 ಕೋಟಿ ಜನರಿಗೆ ಮಾತ್ರ ಬಿಪಿಎಲ್ ಸೌಲಭ್ಯ ಕೊಡಬಹುದು. ಆದರೆ ಈಗಾಗಲೇ 30 ಲಕ್ಷ ಹೆಚ್ಚುವರಿ ಬಿಪಿಎಲ್ ಕಾರ್ಡ್‍ಗಳಿವೆ. ಅದ್ದರಿಂದ ಹೊಸದಾಗಿ ಬಂದಿರುವ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತದೆ. ಅರ್ಹತೆಗಳ ಆಧಾರದಲ್ಲಿ ಜೂನ್ ಮೊದಲ ವಾರ ಹೊಸ ಅರ್ಜಿಗಳ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಒಂದೇ ವರ್ಷದಲ್ಲಿ 3 ಲಕ್ಷ ಬಿಪಿಎಲ್ ಕಾರ್ಡ್‍ಗಳನ್ನು ಕ್ಯಾನ್ಸಲ್ ಮಾಡಲಾಗಿದ್ದು, ಬರೋಬ್ಬರಿ 13 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಅಲ್ಲದೆ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡರೆ ಇದುವರೆಗೆ ಪಡೆದ ರೇಷನ್ ಅಕ್ಕಿ ಲೆಕ್ಕದಲ್ಲಿ ದಂಡ ವಸೂಲಿ ಮಾಡಲಾಗುತ್ತದೆ. ಕೆಜಿಗೆ 38 ರೂ.ನಂತೆ ಲೆಕ್ಕ ಹಾಕಿ ದಂಡ ವಸೂಲಿ ಮಾಡಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಬಿಪಿಎಲ್‌ ಕಾರ್ಡ್‌ ಹೊಂದಲು ಸರ್ಕಾರ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಸರ್ಕಾರಿ ಉದ್ಯೋಗಿಗಳು ಕಾರ್ಡ್ ಪಡೆಯುವಂತಿಲ್ಲ. ಆದಾಯ ತೆರಿಗೆ ಕಟ್ಟುತ್ತಿದ್ದರೆ ಹಾಗೂ 3 ಹೆಕ್ಟೇರ್ ಜಮೀನಿದ್ದರೆ ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗುತ್ತದೆ. 4 ಚಕ್ರದ ವಾಹನ ಇದ್ದು ಬಿಪಿಎಲ್ ಕಾರ್ಡ್ ಪಡೆದರೆ ಕಾರ್ಡ್ ಕ್ಯಾನ್ಸಲ್ ಆಗಲಿದೆ.  ಆದರೆ 4 ಚಕ್ರದ ವಾಹನಕ್ಕೆ ಹಳದಿ ನಂಬರ್ ಪ್ಲೇಟ್ ಇದ್ದರೆ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

suddiyaana