ಸಚಿವ ಸ್ಥಾನಕ್ಕಾಗಿ ಲಾಬಿ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್!

ಸಚಿವ ಸ್ಥಾನಕ್ಕಾಗಿ ಲಾಬಿ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್!

ಬೆಂಗಳೂರು: ಸಿಎಂ ಸ್ಥಾನದ ಕುರಿತು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್‌ ನಡುವಿನ ಹೋರಾಟದ ಬಳಿಕ ಈಗ ಕಾಂಗ್ರೆಸ್‌ ನಲ್ಲಿ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಯುತ್ತಿದೆ. ಕೆಲವು ಶಾಸಕರು ಈಗಾಗಲೇ ದೆಹಲಿಗೆ ತೆರಳಿ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ ಮಟ್ಟದಲ್ಲಿಯೇ ಲಾಬಿ ನಡೆಸುತ್ತಿದ್ದಾರೆ. ಲಾಬಿ ನಡೆಯುತ್ತಿರುವ ಶಾಸಕರಿಗೆ ಈಗ ಕಾಂಗ್ರೆಸ್‌ ಷರತ್ತುಗಳನ್ನು ವಿಧಿಸಿದೆ ಎಂದು ಹೇಳಲಾಗುತ್ತಿದೆ.

ಹಲವು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಹೈಕಮಾಂಡ್  ಬೆನ್ನು ಬಿದ್ದಿದ್ದಾರೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ವಿಚಾರದಲ್ಲಿ ಕಾಂಗ್ರೆಸ್ ಲೋಕಸಭೆಯ ದಾಳ ಉರುಳಿಸಲು ಮುಂದಾಗಿದೆ. ಲೋಕಸಭೆ ಗೆಲುವಿನ ಲೆಕ್ಕಾಚಾರ ಹಾಕಿಯೇ ಈ ಬಾರಿ ಸಚಿವ ಸ್ಥಾನದ ಅವಕಾಶ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ: ʼವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲʼ – ಡಿಕೆ ಬ್ರದರ್ಸ್‌ಗೆ ಮತ್ತೆ ಎಂ.ಬಿ ಪಾಟೀಲ್‌ ತಿರುಗೇಟು!

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25+1, ಕಾಂಗ್ರೆಸ್‌ 1, ಜೆಡಿಎಸ್‌ 1 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿದೆ. ಹೀಗಾಗಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಶಾಸಕರಿಗೆ ಈಗ ಸಚಿವರಾದರೆ ಸಾಲದು ಲೋಕಸಭೆ ಚುನಾವಣೆಗೂ ಸಿದ್ದರಿರಬೇಕು ಎಂದು ಕನಿಷ್ಠ 10 ರಿಂದ 15 ಜನ ಸಚಿವರಿಗೆ ಕಾಂಗ್ರೆಸ್‌ ಈಗಲೇ ಬಿಗ್ ಟಾಸ್ಕ್ ಫಿಕ್ಸ್ ನೀಡಿದೆ ಎಂದು ಕಾಂಗ್ರೆಸ್‌ ವಲಯಗಳಿಂದ ಮಾತು ಕೇಳಿ ಬಂದಿದೆ.

ಈಗ ಯಾವ ಜಾತಿ? ಯಾವ ಜಿಲ್ಲೆ ಎನ್ನುವುದು ಮುಖ್ಯ ಅಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಡುವ ಸಾಮರ್ಥ್ಯ ಇರುವವರು ಎಷ್ಟು ಜನ ಎನ್ನುವುದೇ ಮಾನದಂಡ. ಅಗತ್ಯ ಬಿದ್ದರೆ ಅವರೇ ಅಖಾಡಕ್ಕಿಳಿದು ಗೆದ್ದು ತೋರಿಸಬೇಕು. ಸಚಿವ ಸ್ಥಾನ ಕೇಳುವವರು ಲೋಕಸಭಾ ಟಾಸ್ಕ್ ಪಡೆಯಲೇಬೇಕು ಎಂದು ಕಾಂಗ್ರೆಸ್ ಹೇಳಿದೆ ಎನ್ನಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಯಾವ ಪ್ರಭಾವಿ ಶಾಸಕನಿಗೆ ಸಚಿವಸ್ಥಾನ ಕೊಟ್ಟರೆ ಲೋಕಸಭೆಗೆ ನೆರವಾಗಲಿದೆ? ಯಾರನ್ನ ಮಂತ್ರಿ ಮಾಡಿದರೆ ಲೋಕಸಭೆಗೆ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಅನುಕೂಲವಾಗಲಿದೆ? ಈ ಲೆಕ್ಕಾಚಾರದ ಮೇಲೆ 10-15 ಮಂತ್ರಿಸ್ಥಾನ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.

suddiyaana