ʼವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲʼ – ಡಿಕೆ ಬ್ರದರ್ಸ್ಗೆ ಮತ್ತೆ ಎಂ.ಬಿ ಪಾಟೀಲ್ ತಿರುಗೇಟು!
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಹೊತ್ತಿದ್ದ ಬೆಂಕಿ ಈಗ ವೈಯಕ್ತಿಕ ತಿರುವು ಪಡೆದಿದೆ. ಡಿಕೆ ಬ್ರದರ್ಸ್ ಮತ್ತು ಎಂ.ಬಿ ಪಾಟೀಲ್ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷಗಳಿಗೆ ಸಿಎಂ ಎಂದು ಹೇಳಿದ್ದಕ್ಕೆ ಸಂಸದ ಡಿಕೆ ಸುರೇಶ್ ವಾರ್ನಿಂಗ್ ಕೊಟ್ಟಿದ್ದರು ಎಂಬ ಸುದ್ದಿಗಳ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, “ಡಿಕೆ ಸುರೇಶ್ ನನಗೆ ವಾರ್ನಿಂಗ್ ಕೊಟ್ಟಿಲ್ಲ, ನಾನು ಕೂಡ ಅವರಿಗೆ ವಾರ್ನಿಂಗ್ ಕೊಟ್ಟಿಲ್ಲ. ನನಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ. ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅವರಿಗೆ ವಾರ್ನಿಂಗ್ ಕೊಡುವಂತವರೂ ಯಾರೂ ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: KSRTC ಗೆ ತಲೆನೋವಾದ ಮಹಿಳೆಯರಿಗೆ ಉಚಿತ ಪ್ರಯಾಣ – ಸಿಎಂಗೆ ಪತ್ರ ಬರೆದ ಸಂಸ್ಥೆ
ವಾರ್ನಿಂಗ್ ಎನ್ನುವುದೆಲ್ಲ ನಮ್ಮ ಡಿಕ್ಷನರಿಯಲ್ಲಿ ಇಲ್ಲ, ನಾವು ವಾರ್ನಿಂಗ್ ಕೊಡುವವರೆ ಹೊರತು ತೆಗೆದುಕೊಳ್ಳುವವರಲ್ಲ. ಸುಮ್ಮನೆ ಅವರ ಹೆಸರನ್ನು ತಪ್ಪಾಗಿ ಬಿಂಬಿಸುವುದು ಬೇಕಾಗಿಲ್ಲ. ನಾನು ಮುಂದೆ ಹೋಗುತ್ತಿದ್ದಾಗ ಡಿಕೆ ಸುರೇಶ್ ಅವರು ಪ್ರೀತಿಯಿಂದ ಎಂಬಿ ಪಾಟೀಲರೇ ಅಂತ ಕರೆದರು, ನಾವು ವಾಪಸ್ ಬಂದ ನಂತರ ಪ್ರೀತಿಯಿಂದ ಗಟ್ಟಿಯಾಗಿ ಇರಿ ಎಂದರು. ಪ್ರೀತಿಯಿಂದಲೇ ಅವರು ಮಾತನಾಡಿಸಿದರು. ನಾನು ಆಮೇಲೆ ಸಿಗುತ್ತೇನೆ ಎಂದು ಬಂದೆ” ಇಷ್ಟೇ ಆಗಿರುವುದು ಎಂದರು.
ಯಾರಿಂದಲೂ ವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ. ಡಿಕೆ ಸುರೇಶ್ ಕೂಡ ವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ. ನಮ್ಮ ಸಂಬಂಧ ಚೆನ್ನಾಗಿದೆ. ಈ ರೀತಿ ತಪ್ಪಾಗಿ ಬಿಂಬಿಸುವ ಕೆಲಸ ಆಗಬಾರದು. ನಾನು ಬಿಜಾಪುರದವನು ನಾನು ಯಾರಿಗೂ ಹೆದರುವುದಿಲ್ಲ, ನನಗೆ ಯಾರೂ ಬೆದರಿಕೆ ಹಾಕುವುದು, ವಾರ್ನಿಂಗ್ ಮಾಡುವುದಿಲ್ಲ. ನನ್ನ ತಂದೆ ಕೂಡ ನನಗೆ ಬೆರಳು ತೋರಿಸಿಲ್ಲ. ನಮ್ಮ ಮತ್ತು ಡಿಕೆ ಸುರೇಶ್ ಅವರ ಬಾಂಧವ್ಯ ಚನ್ನಾಗಿದೆ. ಅವರು ತಪ್ಪಾಗಿ ನಡೆದುಕೊಂಡಿಲ್ಲ. ಅವರು ಹಂಗೆ ಮಾಡಿದ್ದರೆ ನಾನು ಅದಕ್ಕೆ ಉತ್ತರ ಕೊಡುತ್ತಿದ್ದೆ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಅವರು ಸಿಎಂ ಅವಧಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ ಎಂಬಿ ಪಾಟೀಲ್ ಪದೇ ಪದೇ ಅದನ್ನೇ ಕೇಳಬೇಡಿ. ನಾನು ಈಗಾಗಲೇ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಾಗಿದೆ. ಮತ್ತೆ ಮತ್ತೆ ಅದೇ ಮಾತನಾಡಲು ಸಾಧ್ಯವಿಲ್ಲ. ಅದನ್ನು ನೀವು ಕೆದಕಲು ಹೋಗಬೇಡಿ ಎಂದರು.