ಇನ್ನೂ ಮೂಡದ ಒಮ್ಮತ – ದಿಲ್ಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಕಸರತ್ತು
ನವದೆಹಲಿ: ಮುಖ್ಯಮಂತ್ರಿ ಸ್ಥಾನದ ಕುರಿತು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವಿನ ಹೋರಾಟದ ಬಳಿಕ ಈಗ ಈ ಇಬ್ಬರು ನಾಯಕರು ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ಹಗ್ಗ ಜಗ್ಗಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ದಂಡು ದಾಳಿ ಕಟ್ಟಿಕೊಂಟು ಸಚಿವ ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿಯೇ ಲಾಬಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಚುನಾವಣೆಯಲ್ಲಿ ಸತತ ಸೋಲು – ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ
ಈಗಾಗಲೇ ಸಿಎಂ, ಡಿಸಿಎಂ ಸೇರಿ ಒಟ್ಟು 10 ಮಂದಿ ಸ್ಥಾನ ಪಡೆದಿದ್ದಾರೆ. ಇನ್ನು ಉಳಿದಿರುವ 23 ಸ್ಥಾನಗಳನ್ನು ಹಂಚಿಕೆ ಮಾಡಬೇಕಿದೆ. ಇಂದು ಸಚಿವ ಸಂಪುಟ ಬಹುತೇಕ ಫೈನಲ್ ಆಗುವ ಸಾಧ್ಯತೆ ಇದೆ. ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಸಭೆ ನಡೆಸಿ ಸಚಿವ ಸ್ಥಾನ ಹಾಗೂ ಖಾತೆ ಹಂಚಿಕೆ ಎರಡೂ ಫೈನಲ್ ಮಾಡುವ ಸಾಧ್ಯತೆ ಇದೆ. ಒಂದೆರಡು ದಿನಗಳಲ್ಲಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಕಾಂಗ್ರೆಸ್ ನಲ್ಲಿ ಈಗಾಗಲೇ 8 ಶಾಸಕರಿಗೆ ಮಂತ್ರಿಗಿರಿ ಸಿಕ್ಕಿದ್ದು, ಇದೀಗ ಮತ್ತೊಂದು ಸುತ್ತಿನ ಸಂಪುಟ ರಚನೆ ಕಸರತ್ತು ನಡೆಯುತ್ತಿದೆ. ಈಗಾಗಲೇ ಸಿದ್ಧರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಕುರಿತು ಕಸರತ್ತು ಆರಂಭಿಸಿದ್ದಾರೆ. ಬುಧವಾರ ಸಿದ್ದರಾಮಯ್ಯ ಅವರಿಗಿಂತ ಮುಂಚಿತವಾಗಿಯೇ ಡಿ.ಕೆ ಶಿವಕುಮಾರ್ ದೆಹಲಿಗೆ ತಲುಪಿದ್ದರು. ದೆಹಲಿಗೆ ತೆರಳಿದ ಅವರು, ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಇನ್ನು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ನಡುವೆ ಸಚಿವರ ಪಟ್ಟಿ ಸಿದ್ಧಪಡಿಸುವಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಒಂದು ಕಡೆ ಹೈಕಮಾಂಡ್ ಒಂದು ಪಟ್ಟಿ ಸಿದ್ಧಪಡಿಸಿಕೊಂಡಿದ್ದರೆ, ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪ್ರತ್ಯೇಕವಾಗಿ ತಮ್ಮದೇ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದಾರೆ. ಸಿಎಂ ಪಟ್ಟಿಗೆ ಡಿಸಿಎಂ ವಿರೋಧ ವ್ಯಕ್ತಪಡಿಸಿದರೆ, ಡಿಸಿಎಂ ಪಟ್ಟಿಯನ್ನು ಸಿಎಂ ರಿಜೆಕ್ಟ್ ಮಾಡಿದ್ರೆ, ಕಮಾಂಡ್ ಸಿದ್ಧಪಡಿಸಿರುವ ಪಟ್ಟಿಯನ್ನು ಈ ಇಬ್ಬರು ವಿರೋಧಿಸಿದ್ದಾರೆ. ಹೀಗಾಗಿಯೇ ಪಟ್ಟಿ ಸಿದ್ಧಪಡಿಸುವುದು ಕಷ್ಟವಾಗುತ್ತಿದೆ. ಎಂಟಂತ್ತು ಮಂದಿ ಹೊರತುಪಡಿಸಿದರೆ ಉಳಿದ ಅಭ್ಯರ್ಥಿಗಳ ವಿಷಯದಲ್ಲಿ ಒಮ್ಮತ ಮೂಡುತ್ತಿಲ್ಲ.