ಬಿಲ್ ಪಾವತಿಗೆ ಗ್ರಾಹಕರಿಂದ ಫೋನ್ ನಂಬರ್ ಪಡೆಯುವಂತಿಲ್ಲ! – ಗ್ರಾಹಕ ವ್ಯವಹಾರಗಳ ಸಚಿವಾಲಯದಿಂದ ಸೂಚನೆ
ನವದೆಹಲಿ: ದೇಶದಾದ್ಯಂತ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಫೋನ್ ಕಾಲ್, ಸಂದೇಶಗಳ ಮೂಲಕ ಜನರನ್ನು ವಂಚಿಸುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಈ ಹಿನ್ನೆಲೆ ಗ್ರಾಹಕ ವ್ಯವಹಾರಗಳ ಸಚಿವಾಲಯವು ಕೆಲವು ಉತ್ಪನ್ನಗಳನ್ನು ನೀಡುವಾಗ ಖರೀದಿದಾರರ ವೈಯಕ್ತಿಕ ಸಂಪರ್ಕ ವಿವರಗಳನ್ನು ನೀಡುವಂತೆ ಒತ್ತಾಯಿಸಬಾರದು ಎಂದು ಚಿಲ್ಲರೆ ವ್ಯಾಪಾರಿಗಳಿಗೆ ಸಲಹೆ ನೀಡಿದೆ.
ಇದನ್ನೂ ಓದಿ:ಬ್ಲ್ಯಾಕ್ ಲಿಸ್ಟ್ ಭಯದಲ್ಲಿ ಭಾರತದ ನೆರವು ಕೇಳಿದ ರಷ್ಯಾ – ಬೆಂಬಲ ನೀಡುವಂತೆ ಮನವಿ!
ಈ ಕುರಿತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಮಾಹಿತಿ ನೀಡಿದ್ದು, ಗ್ರಾಹಕರು ತಮ್ಮ ಸಂಪರ್ಕ ವಿವರಗಳನ್ನು ಹಂಚಿಕೊಳ್ಳದಿದ್ದರೆ ಬಿಲ್ ಮಾಡಲು ಸಾಧ್ಯವಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಇದು ಗ್ರಾಹಕ ಸಂರಕ್ಷಣಾ ಕಾಯಿದೆಯಡಿಯಲ್ಲಿ ಅನ್ಯಾಯ ಮತ್ತು ನಿರ್ಬಂಧಿತ ವ್ಯಾಪಾರದ ಅಭ್ಯಾಸವಾಗಿದೆ. ಅದೇ ವೇಳೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ತಕ್ಕ ಕಾರಣ ಯಾವುದೂ ಇಲ್ಲ. ಈ ಹಿನ್ನೆಲೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಗ್ರಾಹಕರ ಹಿತಾಸಕ್ತಿಯಿಂದ ಚಿಲ್ಲರೆ ಉದ್ಯಮ ಮತ್ತು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (ಎಫ್ಐಸಿಸಿಐ) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ)ಸೇರಿದಂತೆ ಉದ್ಯಮ ಚೇಂಬರ್ಗಳಿಗೆ ಈ ಬಗ್ಗೆ ಸಲಹೆ ನೀಡಲಾಗಿದೆ. ಏನನ್ನಾದರೂ ಡೆಲಿವರಿ ಮಾಡಲು ಅಥವಾ ಬಿಲ್ ಮಾಡಲು ಚಿಲ್ಲರೆ ವ್ಯಾಪಾರಿಗಳಿಗೆ ಫೋನ್ ಸಂಖ್ಯೆಗಳನ್ನು ಒದಗಿಸುವುದು ಭಾರತದಲ್ಲಿ ಅಗತ್ಯವಿಲ್ಲ ಎಂದು ಸಿಂಗ್ ಹೇಳಿದ್ದಾರೆ.