ʼಹೇಳಿಕೆಗಳಿಗೆ ಕಡಿವಾಣ ಬೀಳದೇ ಇದ್ದರೆ ನಾನು ಸರ್ಕಾರದ ಭಾಗವಾಗಿರಲ್ಲʼ – ಹೈಕಮಾಂಡ್ ಗೆ ಡಿಕೆಶಿ ಖಡಕ್ ಎಚ್ಚರಿಕೆ!
ಬೆಂಗಳೂರು: ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಎಂ.ಬಿ ಪಾಟೀಲ್ ನೀಡಿದ್ದ ಹೇಳಿಕೆ ಸಾಕಷ್ಟು ಗೊಂದಲ ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ. ಕಡೆಗೆ ಎಂಬಿ ಪಾಟೀಲ್ ಯೂಟರ್ನ್ ಹೊಡೆದು ಸ್ಪಷ್ಟನೆ ನೀಡಿದ್ದಾರೆ. ಇದೀಗ ಸಚಿವ ಎಂಬಿ ಪಾಟೀಲ್ ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ಕೆಂಡಾಮಂಡಲವಾಗಿದ್ದು ಈಗ ಹೈಕಮಾಂಡ್ ನಾಯಕರಿಗೆ ದೂರು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಎಂದು ಹೇಳಿಕೆ ನೀಡಿದ್ದಕ್ಕೆ ಡಿಕೆಶಿ ಗರಂ ಆಗಿದ್ದಾರೆ. ಈ ರೀತಿ ಹೇಳಿಕೆ ನೀಡಿದರೆ ನಾನು ಸರ್ಕಾರದಿಂದ ಹೊರಗಿರುತ್ತೇನೆ ಎಂದು ನೇರವಾಗಿಯೇ ಹೈಕಮಾಂಡ್ ನಾಯಕರಿಗೆ ಡಿಕೆಶಿ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: `ಸಿದ್ದು ಪೂರ್ಣಾವಧಿ ಸಿಎಂ’- ಕಾಂಗ್ರೆಸ್ ಒಳಗೆ ಕಿಚ್ಚು ಹಚ್ಚಿ ಎಂ.ಬಿ ಪಾಟೀಲ್ ಯುಟರ್ನ್ ಹೊಡೆದಿದ್ಯಾಕೆ?
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಕರ್ನಾಟಕ ಉಸ್ತುವಾರಿ ರಣ್‌ದೀಪ್ ಸುರ್ಜೇವಾಲಾ ಅವರಿಗೆ ಕರೆ ಮಾಡಿರುವ ಡಿಕೆಶಿ, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಹೇಳಲು ಎಂಬಿ ಪಾಟೀಲ್ ಯಾರು? ಅವರು ಹೈಕಮಾಂಡ್ ನಾಯಕರೇ? ಅವರು ಕಾಂಗ್ರೆಸ್ ಅಧ್ಯಕ್ಷರೇ? ಯಾವ ಆಧಾರದ ಮೇಲೆ ಎಂ.ಬಿ.ಪಾಟೀಲ್ ಮಾತನಾಡಿದ್ದಾರೆ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ. ಈಗಲೇ ಈ ರೀತಿ ಶುರುವಾದರೆ ಮುಂದೆ ಕಷ್ಟವಾಗಲಿದೆ. ಸಚಿವಾಗಿರುವ ಎಂಬಿ ಪಾಟೀಲ್ ಈ ರೀತಿಯಾಗಿ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಅಸಮಾಧಾನ ಹೊರಹಾಕಿದ್ದಾರೆ.
ನನ್ನ ನಿಲುವು ಸ್ಪಷ್ಟವಾಗಿದೆ. ಕೊಟ್ಟ ಮಾತು ಉಳಿಸಿಕೊಂಡು ಸರ್ಕಾರದ ಭರವಸೆ ಈಡೇರಿಸುವುದು ನನ್ನ ಮೊದಲ ಆದ್ಯತೆ. ಈ ರೀತಿಯ ಮಾತುಗಳು ಮತ್ತಷ್ಟು ಬಂದರೆ ನಾನು ಸರ್ಕಾರದಿಂದ ಹೊರಗಿರಲು ಸಿದ್ದ. ಬಹಿರಂಗ ಹೇಳಿಕೆಗಳಿಗೆ ಸಂಪೂರ್ಣ ಬ್ರೇಕ್ ಹಾಕುವುದಾದರೆ ಹಾಕಿಸಿ. ಈ ರೀತಿಯ ಹೇಳಿಕೆಗಳಿಗೆ ಕಡಿವಾಣ ಬೀಳದೇ ಇದ್ದರೆ ನಾನು ಸರ್ಕಾರದ ಭಾಗವಾಗಿರಲ್ಲ ಎಂದು ಡಿಕೆಶಿ ಹೈಕಮಾಂಡ್ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.