ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಯು.ಟಿ ಖಾದರ್
ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತದೆ, ಸ್ಪೀಕರ್ ಎಲ್ಲರಿಗೂ ಸಿಗುವುದಿಲ್ಲ - ಯು.ಟಿ ಖಾದರ್
ಬೆಂಗಳೂರು: ಹಲವು ದಿನಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಯ್ಕೆ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ಮಾಜಿ ಸಚಿವ ಯು.ಟಿ. ಖಾದರ್ ಅವರನ್ನು ವಿಧಾನಸಭಾಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಸೋಮವಾರ ತಡರಾತ್ರಿ ನಿರ್ಧರಿಸಿದೆ. ಈ ಹಿನ್ನೆಲೆ ಮಾಜಿ ಸಚಿವ ಯು.ಟಿ ಖಾದರ್ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಮನವೊಲಿಕೆ ಸಕ್ಸಸ್ – ಸ್ವೀಕರ್ ಸ್ಥಾನಕ್ಕೆ ಯು.ಟಿ ಖಾದರ್ ಫಿಕ್ಸ್?
ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಸ್ತಾಪಿಸಿ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅನುಮೋದಿಸಿದ ಅರ್ಜಿಯನ್ನು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಮಂಗಳವಾರ ಸಲ್ಲಿಸಲಾಯಿತು.
ದೇಶಪಾಂಡೆ ಅವರನ್ನು ಸ್ಪೀಕರ್ ಹುದ್ದೆಯನ್ನು ನಿಭಾಯಿಸಲು ಕೇಳಲಾಯಿತು. ಆದರೆ, ಅವರು ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಹುದ್ದೆಯನ್ನು ನಿರಾಕರಿಸಿದರು. ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹೆ.ಚ್‌ಕೆ ಪಾಟೀಲ್ ಅವರನ್ನು ಕೂಡ ಸ್ಪೀಕರ್ ಹುದ್ದೆಗೆ ಪಕ್ಷ ಪರಿಗಣಿಸಲಾಗಿತ್ತು. ಆದರೆ ಅವರು ಯಾರೂ ಕೂಡ ಈ ಸ್ಥಾನ ವಹಿಸಿಕೊಳ್ಳಲು ಮುಂದಾಗದ ಕಾರಣ ಖಾದರ್ ಅವರನ್ನು ಆಯ್ಕೆ ಮಾಡಲಾಗಿದೆ. ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಲಹೆಯಂತೆ ಸಭಾಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಖಾದರ್ ಒಪ್ಪಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ, ಯು.ಟಿ.ಖಾದರ್, ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ, ಈಗ ಸ್ಪೀಕರ್ ಆಗಲು ಸೂಚನೆ ನೀಡಿದ್ದಾರೆ. ಹೈಕಮಾಂಡ್ ನಾಯಕರು ಸ್ಪೀಕರ್ ಆಗಲು ಹೇಳಿದ್ದಕ್ಕೆ ಒಪ್ಪಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಚರ್ಚೆ ಮಾಡಿದ್ದಾರೆ. ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತದೆ, ಆದ್ರೆ ಸ್ಪೀಕರ್ ಎಲ್ಲರಿಗೂ ಸಿಗುವುದಿಲ್ಲ. ಪಾರದರ್ಶಕವಾಗಿ ನಾನು ಕಲಾಪವನ್ನು ನಡೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.