ಇಂದಿನಿಂದ 2,000 ರೂ. ಮುಖಬೆಲೆಯ ನೋಟು ಬದಲಿಸಲು ಅವಕಾಶ – ನೋಟು ವಿನಿಮಯ ಪ್ರಕ್ರಿಯೆ ಹೇಗೆ?

ಇಂದಿನಿಂದ 2,000 ರೂ. ಮುಖಬೆಲೆಯ ನೋಟು ಬದಲಿಸಲು ಅವಕಾಶ – ನೋಟು ವಿನಿಮಯ ಪ್ರಕ್ರಿಯೆ ಹೇಗೆ?

ನವದೆಹಲಿ: ದೇಶದಾದ್ಯಂತ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ನಿರ್ಧರಿಸಿದೆ. ಈ ಹಿನ್ನೆಲೆ ಮಂಗಳವಾರದಿಂದ 2,000 ರೂಪಾಯಿ ನೋಟುಗಳನ್ನು ಬ್ಯಾಂಕುಗಳಿಗೆ ನೀಡಿ ಬದಲಾಯಿಸಿಕೊಳ್ಳಬಹುದು ಅಥವಾ ಡೆಪಾಸಿಟ್ ಮಾಡಿಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಮೇ 23 ರಿಂದ ಸೆಪ್ಟೆಂಬರ್ 30 ರವರೆಗೂ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದ್ದು, ಈ 4 ತಿಂಗಳ ಗಡುವಿನಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದು. 2,000 ರೂ. ರೂಪಾಯಿ ಮುಖಬೆಲೆಯ ನೋಟುಗಳನ್ನು ಯಾವುದೇ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಬಹುದಾಗಿದೆ. ಅದಲ್ಲದೇ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ 2,000 ರೂ. ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅವಾಂತರ – ಇಂದು ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ

ಆರ್‌ಬಿಐ ಘೋಷಣೆಯ ಬಳಿಕ ರಿಕ್ವೆಸ್ಟ್ ಫಾರ್ಮ್ ಅನ್ನು ಭರ್ತಿ ಮಾಡಿ ನೋಟು ಬದಲಾವಣೆ ಮಾಡಬೇಕು ಎಂಬ ಸುದ್ದಿ ಹರಿದಾಡಿತ್ತು. ಆದರೆ ಭಾನುವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ವದಂತಿಗಳಿಗೆ ಸ್ಪಷ್ಟನೆ ನೀಡಿದೆ. ಸಾರ್ವಜನಿಕರು ಬ್ಯಾಂಕ್‌ಗಳಲ್ಲಿ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಯಾವುದೇ ನಮೂನೆಯನ್ನು ಭರ್ತಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ.

ನೋಟು ವಿನಿಮಯ ವೇಳೆ ಸಾರ್ವಜನಿಕರು ಗುರುತಿನ ಚೀಟಿ ನೀಡಬೇಕು, ಶುಲ್ಕ ವಿಧಿಸಬೇಕು ಎಂಬ ವದಂತಿಗಳು ಹರಿದಾಡಿತ್ತು. ಆದರೆ ನೋಟುಗಳ ವಿನಿಮಯ ಹಾಗೂ ಠೇವಣಿಗೆ ಗುರುತಿನ ಚೀಟಿ ನೀಡುವ ಅಗತ್ಯವಿಲ್ಲ. ಹಾಗೇ ನೋಟುಗಳ ವಿನಿಮಯ ಹಾಗೂ ಠೇವಣಿಗೆ ಯಾವುದೇ ಶುಲ್ಕವನ್ನು ಬ್ಯಾಂಕ್‌ಗಳಿಗೆ ಪಾವತಿಸಬೇಕಿಲ್ಲ. ಬ್ಯಾಂಕ್‌ಗಳು ಉಚಿತವಾಗಿಯೇ ನಿಮ್ಮ ನೋಟುಗಳನ್ನು ಬದಲಿಸಿಕೊಡುತ್ತವೆ. ಆದ್ದರಿಂದ ನಿರಾತಂಕವಾಗಿ 2,000 ರೂ. ನೋಟು ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ.

2,000 ಮುಖಬೆಲೆಯ ನೋಟುಗಳನ್ನು ಒಬ್ಬರು ಒಂದು ಬಾರಿ ಗರಿಷ್ಠ 10 ನೋಟುಗಳು ಅಂದರೆ 20,000 ರೂ.ಯನ್ನು ಬದಲಿಸಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ. ಅದಲ್ಲದೇ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಎಷ್ಟು ಬಾರಿಯಾದರೂ ಸರತಿ ಸಾಲಿನಲ್ಲಿ ನಿಂತು ನೋಟುಗಳನ್ನು ಬದಲಿಸಿಕೊಳ್ಳಬಹುದು. ಆದರೆ ಒಂದು ಬಾರಿಗೆ ಗರಿಷ್ಠ 20,000 ರೂ. ಮಾತ್ರ ಬದಲಾವಣೆಗೆ ಅವಕಾಶ ನೀಡಲಾಗಿದೆ.

ಬ್ಯಾಂಕ್‌ಗಳಲ್ಲಿ 2,000 ರೂ. ನೋಟು ಡೆಪಾಸಿಟ್ ಮಾಡಲು ಅವಕಾಶನೀಡಲಾಗಿದೆ. ಅದನ್ನು ಕೇವಲ ಚಲಾವಣೆಯಿಂದ ಹಿಂಪಡೆಯಲಾಗಿದೆ. ಬ್ಯಾಂಕ್‌ಗಳಲ್ಲಿ 2,000 ರೂ. ನೋಟುಗಳನ್ನು ಜಮಾ ಮಾಡಬಹುದು. ಆದರೆ ಇದಕ್ಕೆ ಯಾವುದೇ ಮಿತಿಯನ್ನು ಆರ್‌ಬಿಐ ವಿಧಿಸಿಲ್ಲ. ನಿಗದಿತ ಮಿತಿ ದಾಟಿದ ಪ್ರಕರಣಗಳಲ್ಲಿ ಕೆವೈಸಿ ಸೇರಿ ಅಗತ್ಯ ಶಾಸನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾದ ಅಗತ್ಯವಿದೆ ಎಂದು ಆರ್‌ ಬಿಐ ಹೇಳಿದೆ.

suddiyaana