ಆಹಾರಕ್ಕಾಗಿ ಬಂದ ಗರ್ಭಿಣಿ ಆನೆ ಮೇಲೆ ಗುಂಡೇಟು – ಕಾಡಾನೆ ಗರ್ಭದಲ್ಲೇ 10 ತಿಂಗಳ ಕಂದ ಸಾವು!

ಆಹಾರಕ್ಕಾಗಿ ಬಂದ ಗರ್ಭಿಣಿ ಆನೆ ಮೇಲೆ ಗುಂಡೇಟು – ಕಾಡಾನೆ ಗರ್ಭದಲ್ಲೇ 10 ತಿಂಗಳ ಕಂದ ಸಾವು!

ಮಾನವ ಮತ್ತು ಕಾಡಾನೆಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಕಾಡಂಚಿನ ಜಮೀನುಗಳಿಗೆ ನುಗ್ಗಿ ಪದೇಪದೆ ಬೆಳೆ ಹಾಳು ಮಾಡುತ್ತವೆ ಅನ್ನುವ ದೂರು ಮೊದಲಿನಿಂದಲೂ ಇದೆ. ಈ ಗ್ರಾಮದಲ್ಲೂ ಕೂಡ ಕಾಡಾನೆಯೊಂದು ಕಾಫಿತೋಟಕ್ಕೆ ನುಗ್ಗಿ ಆಹಾರ ಸೇವಿಸುತ್ತಿತ್ತು. ಆದರೆ ಪಾಪಿಗಳ ಗುಂಡೇಟು ಎರಡು ಜೀವಗಳನ್ನ ತೆಗೆದಿದೆ.

ಇನ್ನೂ ಕಣ್ಣು ಬಿಡದ ಅಮ್ಮನ ಹೊಟ್ಟೆಯನ್ನೇ ಜಗತ್ತಾಗಿಸಿಕೊಂಡ ಮರಿಯಾನೆ ಅಮ್ಮನ ಗರ್ಭದಲ್ಲೇ ಕಣ್ಮುಚ್ಚಿದೆ.  ಹಸಿವು ನೀಗಿಸಿಕೊಳ್ಳಲು ತೋಟದತ್ತ ನುಗ್ಗಿದ 10 ತಿಂಗಳ ಗರ್ಭಿಣಿ ಆನೆಯೊಂದು ದಾರುಣವಾಗಿ ಉಸಿರು ಚೆಲ್ಲಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ರಸೂಲ್ ​ಪುರ ಬಾಳುಗೋಡಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಈ ಹೆಣ್ಣಾನೆಯನ್ನು ಕಿಡಿಗೇಡಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಅಂದಾಜು 20 ವರ್ಷದ ಹೆಣ್ಣಾನೆಯನ್ನು ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ರಸೂಲ್ ಪುರ, ಬಾಳುಗೋಡು ಹಾಗೆ ದುಬಾರೆ ಭಾಗದಲ್ಲಿ ಕಾಡಾನೆಗಳ ಕಾಟ ಹೊಸದೇನೂ ಅಲ್ಲ. ಆ ಭಾಗದಲ್ಲೆಲ್ಲಾ ಸಾಕಷ್ಟು ಅರಣ್ಯ ಪ್ರದೇಶ ಇರುವುದರಿಂದ ಅಲ್ಲಿರುವ ಆನೆಗಳು ಪ್ರತೀ ರಾತ್ರಿ ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದೇ ಬರುತ್ತವೆ. ಇದಕ್ಕಾಗಿ ರೈತರು, ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿಯನ್ನು ನಿರ್ಮಿಸಲಾಗಿದೆ. ಆದರೆ ಇವುಗಳು ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಆನೆಗಳು ಸುಲಭವಾಗಿ ರೈತರ ತೋಟ ಗದ್ದೆಗಳಿಗೆ ನುಗ್ಗುತ್ತವೆ.

ಇದನ್ನೂ ಓದಿ : ರಾಜ್ಯದಲ್ಲಿ ವರುಣನ ರೌದ್ರಾವತಾರ – ಆರು ಮಂದಿ ಸಾವು, ಹಲವೆಡೆ ಹಾನಿ

ಹೀಗೆ ರಾತ್ರಿಯೂ ಕೂಡ ಕಾಫಿ ತೋಟಗಳಿಗೆ ನುಗ್ಗಿದ ಹೆಣ್ಣಾನೆಯೊಂದಕ್ಕೆ ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ಶೂಟ್ ಮಾಡುತ್ತಿದ್ದಂತೆ ಆನೆ ಸ್ಥಳದಲ್ಲಿಯೇ ಸತ್ತು ಬಿದ್ದಿದೆ. ಡಿಂಪು ಎಂಬುವವರ ತೋಟದಲ್ಲಿ ಆನೆ ಸತ್ತು ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಬೆಳಿಗ್ಗೆಯೇ ಸ್ಥಳಕ್ಕೆ ಮಡಿಕೇರಿ ಡಿಎಫ್ಓ ಶಿವರಾಮ್ ಬಾಬು, ಕುಶಾಲನಗರ ಆರ್​ಎಫ್ಓ ಶಿವರಾಮ್, ದುಬ್ಬಾರೆ ವ್ಯಾಪ್ತಿಯ ಡಿಆರ್​ಎಫ್ಓ ಕೆ.ಪಿ. ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆ ಸತ್ತು ಬಿದ್ದಿರುವ ತೋಟದ ಮಾಲೀಕರಾದ ಡಿಂಪು ಮತ್ತು ಅದೇ ಗ್ರಾಮದ ಮತ್ತೋರ್ವ ವ್ಯಕ್ತಿ ದಿನೇಶ್ ಎಂಬುವವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಆನೆ ಸತ್ತು ಬಿದ್ದಿರುವ ಜಾಗದಲ್ಲಿ ಗುಂಡಿನ ಕಾಟ್ರೇಜ್​ಗಳು ಕೂಡ ಸಿಕ್ಕಿದ್ದು, ಇದರಿಂದ ಯಾರು ಆನೆಯನ್ನು ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಸುಲಭವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅನುಮಾನ ವ್ಯಕ್ತಪಡಿಸಿರುವ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಹತ್ಯೆಯಾಗಿರುವ ಆನೆಯನ್ನು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಆನೆಗೆ ಎರಡು ಸುತ್ತಿನ ಗುಂಡು ಹಾರಿಸಲಾಗಿದ್ದು, ಇದು ಉದ್ದೇಶ ಪೂರ್ವಕವಾಗಿಯೇ ಗುಂಡು ಹೊಡೆದು ಹತ್ಯೆ ಮಾಡಿರುವುದು ಎನ್ನಲಾಗಿದೆ. ಒಂದು ಗುಂಡು ಆನೆಯ ತಲೆಗೆ ತಲೆಗೆ ಸರಿಯಾಗಿ ಬಿದ್ದಿದ್ದರೆ, ಮತ್ತೊಂದು ಗುಂಡು ಕುತ್ತಿಗೆಗೆ ಹೊಕ್ಕಿದೆ. ಹೀಗಾಗಿ ಆನೆ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಶಿವರಾಮ್ ಬಾಬು ತಿಳಿಸಿದ್ದಾರೆ. ಆನೆ 10 ತಿಂಗಳ ಗರ್ಭಿಣಿಯಾಗಿತ್ತು ಎನ್ನುವುದು ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗಿದೆ. ಇನ್ನು ಕೆಲವು ತಿಂಗಳು ಕಳೆದಿದ್ದರೆ ಆನೆ ಮರಿಯೊಂದಕ್ಕೆ ಜೀವ ನೀಡುತಿತ್ತು. ಆನೆ ಮೃತಪಟ್ಟಿದ್ದರಿಂದ ಹೊಟ್ಟೆಯಲ್ಲಿದ್ದ ಮರಿಯೂ ಕಣ್ಬಿಡುವುದಕ್ಕೂ ಮುನ್ನವೇ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ಬಳಿಕ ಅಲ್ಲಿಯೇ ಆನೆ ಶವ ಸಂಸ್ಕಾರ ಮಾಡಲಾಗಿದೆ.

suddiyaana