ವರುಣನ ಮೃತ್ಯುಕೇಕೆಗೆ ರಾಜ್ಯದಲ್ಲಿ 8 ಜನ ಮರಣ – ಆಲಿಕಲ್ಲು ಮಳೆಗೆ ಬೆಳೆಯೂ ಸರ್ವನಾಶ!
ಆಲಿಕಲ್ಲು ಮಳೆ ಬೆಳೆಯನ್ನೇ ನಾಶ ಮಾಡಿದೆ. ಬಿರುಗಾಳಿ ಮಳೆಗೆ ಮರಗಳೇ ಬುಡಮೇಲಾಗುತ್ತಿವೆ. ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣ ಮರಣ ಮೃದಂಗ ಬಾರಿಸಿದ್ದಾನೆ. ಗುಡುಗು ಸಹಿತ ಸುರಿಯುತ್ತಿರೋ ಮಳೆ ರಾಜ್ಯಾದ್ಯಂತ 8 ಜನರ ಜೀವ ತೆಗೆದಿದೆ. ಭಾನುವಾರ ಕೇವಲ ಮುಕ್ಕಾಲು ಗಂಟೆ ಸುರಿದ ಮಳೆ ಬೆಂಗಳೂರನ್ನೇ ನಡುಗಿಸಿದೆ.
ಕೆ.ಆರ್ ಸರ್ಕಲ್ ಅಂಡರ್ ಪಾಸ್ ಜಲಾವೃತವಾಗಿ ಕಾರು ಮುಳುಗಿ 23 ವರ್ಷದ ಭಾನುರೇಖಾ ಮೃತಪಟ್ಟಿದ್ದರು. ಕಾರಿನಲ್ಲಿದ್ದ 6 ಜನರನ್ನ ರಕ್ಷಣೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಕಾರು ಚಾಲಕನನ್ನ ಅರೆಸ್ಟ್ ಮಾಡಲಾಗಿದೆ. ಪ್ರಯಾಣಿಕರು ಬೇಡ ಎಂದು ಹೇಳಿದರೂ ಕೇಳದ ಚಾಲಕ ಹರೀಶ್, ನೀರು ತುಂಬಿದ್ದ ಅಂಡರ್ ಪಾಸ್ನಲ್ಲಿ ಕಾರು ಚಲಾಯಿಸಿದ್ದಂತೆ. ಈ ವೇಳೆ ಕಾರ್ ಬಂದ್ ಆಗಿದ್ದು ಪ್ರಯಾಣಿಕರು ಕಾರಿನಿಂದ ಇಳಿಯಲು ಯತ್ನಿಸಿದಾಗ ಹರೀಶ್, ಬೇಡ ತಾನೇ ಕಾರ್ ಆನ್ ಮಾಡಿ ಕರೆದೊಯ್ಯುವುದಾಗಿ ಹೇಳಿದ್ದ ಎಂದು ಆರೋಪಿಸಲಾಗಿದೆ. ಮತ್ತೊಂದೆಡೆ ಕೆ.ಪಿ ಅಗ್ರಹಾರದಲ್ಲಿ ಮಳೆಯಿಂದಾಗಿ ತುಂಬಿ ಹರೀತಿದ್ದ ರಾಜಕಾಲುವೆಗೆ ಬಿದ್ದು ಲೋಕೇಶ್ ಎನ್ನುವವರು ಸಾವನ್ನಪ್ಪಿದ್ದಾರೆ. ಹಾಗೇ ಬೆಂಗಳೂರಿನ ಬಹುತೇಕ ಕಡೆ ಮರಗಳು ಧರೆಗುರುಳಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುತ್ತಿದ್ದಾರೆ.
ಇದನ್ನೂ ಓದಿ : ಬದುಕು ನುಂಗಿದ ಮಹಾಮಳೆ – ಜ್ಯುವೆಲ್ಲರಿ ಶಾಪ್‌ಗೆ ನೀರು ನುಗ್ಗಿ ಕೊಚ್ಚಿ ಹೋಯ್ತು ಆಭರಣ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಡಿ. ಸಿದ್ದಾಪುರದಲ್ಲಿ ಸಿಡಿಲು ಬಡಿದು ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನ ಮೃತಪಟ್ಟಿದ್ದಾರೆ. ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಕೆ.ದೊಡ್ಡಕೊಪ್ಪಲಿನ ಸ್ವಾಮಿ ಸಾವಿಗೀಡಾಗಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಅವರ್ತಿಯಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಸಿಡಿಲು ಬಡಿದು ಉಸಿರು ಚೆಲ್ಲಿದ್ದಾರೆ. ಹಾಗೇ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮಂಟೆಕೊಪ್ಪಲಿನಲ್ಲಿ ಸಿಡಿಲು ಬಡಿದು ಹರೀಶ್ ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಮರ ದ್ವಿಚಕ್ರ ವಾಹನದ ಮೇಲೆ ಉರುಳಿ, ಸವಾರ ವೇಣುಗೋಪಾಲ್ ಸಾವಿಗೀಡಾಗಿದ್ದಾರೆ. ಕೊಪ್ಪಳ ತಾಲ್ಲೂಕಿನ ಶಿವಪುರದಲ್ಲಿ ಶ್ರೀಕಾಂತ್ ಮೇಟಿ ಎಂಬ ಬಾಲಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಇನ್ನೂ ನಾಲ್ಕು ದಿನಗಳ ರಾಜ್ಯಾದ್ಯಂತ ಮಳೆಯಾಗುವ ನಿರೀಕ್ಷೆ ಇದ್ದು, ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಜ್ಞರು ಮುನ್ಸೂಚನೆ ನೀಡಿದ್ದಾರೆ.