ವರುಣನ ಆರ್ಭಟಕ್ಕೆ ಬೆಳೆ ಹಾನಿ – ರಾಜ್ಯದಲ್ಲಿ ಹಣ್ಣು, ತರಕಾರಿ ಬೆಲೆ ಏರಿಕೆ ಭೀತಿ
ಬೆಂಗಳೂರು: ರಾಜ್ಯದ ಹಲವೆಡೆ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಭಾನುವಾರ ಮಧ್ಯಾಹ್ನ ಹಲವೆಡೆ ಎರಡು ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿದಿದೆ. ಇನ್ನು ಐದು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ಈಗ ರೈತರಿಗೆ ಬೆಳೆಹಾನಿ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ವರುಣನ ರೌದ್ರಾವತಾರ – ಆರು ಮಂದಿ ಸಾವು, ಹಲವೆಡೆ ಹಾನಿ
ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಪೂರೈಸುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಟೊಮೇಟೊ, ಕ್ಯಾಪ್ಸಿಕಂ, ಬೀನ್ಸ್, ಮಾವು, ದ್ರಾಕ್ಷಿ ಬೆಳೆಗಳು ಹಾಳಾಗಿದ್ದು, ಲಕ್ಷಗಟ್ಟಲೆ ರೂಪಾಯಿ ನಷ್ಟವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಮಳೆಯಿಂದಾಗಿ ಉಂಟಾಗಿರುವ ಈ ಹಾನಿಯು ಹಣ್ಣುಗಳು ಮತ್ತು ತರಕಾರಿಗಳ ಪೂರೈಕೆಗೆ ಅಡ್ಡಿಪಡಿಸಬಹುದು. ಇದರಿಂದಾಗಿ ಹಣ್ಣು, ತರಕಾರಿಗಳಿಗೆ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಮಳೆಯ ಆರ್ಭಟಕ್ಕೆ ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಭಾರಿ ಗಾಳಿ ಮಳೆಯಾಗಿದ್ದರಿಂದ ಮಾವು ಮತ್ತು ದ್ರಾಕ್ಷಿ ಬೆಳೆಗಾರರು ತೀವ್ರ ನಷ್ಟ ಎದುರಿಸುತ್ತಿದ್ದಾರೆ. ರೈತರು ಈಗಾಗಲೇ ಬಂಗನಪಲ್ಲೆ, ಬೇನಿಶಾ, ರಾಜಗೀರಾ ಮತ್ತು ರಸಪುರಿ ತಳಿಗಳ ಮಾವು ಕಟಾವು ಆರಂಭಿಸಿದ್ದರು. ಮಳೆಯ ನಂತರ ಕಡಿಮೆ ಬೆಲೆಗೆ ತಮ್ಮ ಉತ್ಪನ್ನ ಮಾರಾಟವಾಗುವ ಆತಂಕವಿದೆ.